ಸಂಚದ ನೋಟ ಒಂದೆ ನೋಡಾ




                                                          
[ಇದನ್ನ ಕಥನ ಕವನ ಎಂದು ಕರೆಯುತ್ತೇನೆ. ಗಮನಿಸಿ, ಇದು ಕತೆಯಲ್ಲ. ಇಲ್ಲಿ ಕತೆಯ ಬಂಧವಿಲ್ಲ. ಆದ್ದರಿಂದ ಇಲ್ಲಿ ಕತೆಯನ್ನ ಹುಡುಕಬೇಡಿ. ಓದಲು ಬೇಸರ ಆದರೆ ಓದದೆ ನಿಲ್ಲಿಸಿಬಿಡಿ. ಇದು ಕಥನವೂ ಹೌದು, ಕವನವೂ ಹೌದು.]





                                                            ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ
                                                            ಸಂಚದ ನೋಟ ಒಂದೆ ನೋಡಾ
                                                            ಗುಹೇಶ್ವರ...............

ರಶೀದ್ ಅಣ್ಣ ದಯವಿಟ್ಟು ಕ್ಷಮಿಸಿ ಬಿಡಿ, ನಾನು ಕತೆಯನ್ನು ಬರೆಯಲಿಕ್ಕೆ ಆಗಲಿಲ್ಲ. ನೀವು ಹೇಳಿದ್ದಿರಿ ಒಂದು ಕತೆ ಬರಿ ಎಂದು, ಆಗಲಿಲ್ಲ.

ನಿಜ್ವಾಗು ಕತೆ ಬರೀಲಿಕ್ಕೆ ಆಗಲೇ ಇಲ್ಲ.
ಏನೇನೋ ಮಾಡಿದೆ. ಆಯ್ತ ಅಂದರೆ ಇಲ್ಲ. ಪಟ್ಟಾಕಿ ಕೂತದ್ದು ಆಯ್ತು. ಊಹೂ ಏನು ಪ್ರಯೊಜನ ಇಲ್ಲದೆ ಹೋಯಿತು. ಏನೂ ಬರೆಲೇ ಇಲ್ಲ. ಎಲ್ಲೊ ದೂರದಲ್ಲಿ ಆರಾಮಾಗಿ, ಹಾಯಾಗಿ, ಕೂತು ಆ ಪದ ಈ ಪದ ಅಂತ ಹುಡ್ಕಿ ಜೋಡಿಸಿ ನಾಲ್ಕು ಸಾಲು ಮಾಡಿ ಕವನ ಅಂತ ಮಾಡಿ ಬಿಟ್ಟರೆ ಮುಗೀತು. ಎಷ್ಟು ಆರಾಮು. ಆದ್ರೆ ಈ ಕತೆ ,ಬಹುಶಃ ಈ ಕತೆ ಬರ್ಯೋಕೆ ಆಗ್ದೇ ಇರೋದು ನಂಗೆ ಮಾತ್ರ ಇರ್ಬೇಕು. ಜಪ್ಪಯ್ಯ ಅಂದ್ರೂ ಬರೀಲಿಕ್ಕೆ ಆಗ್ಲೆ ಇಲ್ಲ. ನಮ್ಮ ಒಬ್ಬರು ಗಣಿತದ ಮೆಡಮ್ ಹೇಳ್ತ ಇದ್ದರು ಅಲ್ಲಾರಿ ಬದ್ಕು ಇಷ್ಟೊಂದು ನರಳಾಟದಲ್ಲಿ ಉಂಟ, ಇಲ್ಲ ಅಂದಮೇಲೆ ಈ ಕತೆಗಳ್ಯಾಕ್ರಿ ಈ ಪಾಟಿ ತೊನ್ಲಾಡ್ತವೆ ಅಂತ. ಅದ್ಕೆ ಅಲ್ಲೆ ಪಕ್ಕ ಇದ್ದ ನಮ್ಮ ಕನ್ನಡದ ಮೇಡಮ್, ಅಲ್ಲ ಮೇಡಮ್ ಆ ಕತೆಗಳಲ್ಲಿ ಅಷ್ಟು ಕಾಡಿಸ್ತಾರೆ ಅದ್ಕೆ ನಿಮ್ಗೆ ಅದು ನೆನಪಿರುತ್ತೇ ಅಂತ. ಅದೇನಾದ್ರು ಇರ್ಲಿ ನಂಗಂತು ಕತೆ ಬರೀಲಿಕ್ಕೆ ಆಗಲಿಲ್ಲ. ಬಹುಶಃ ಮುಂದೇನು ಆಗೋಲ್ಲ ಅಂತ ಕಾಣುತ್ತೆ.

ಅದೇನಾಯ್ತು ಗೊತ್ತುಂಟ, ನಾನು ಕತೆ ಬರಿಬೇಕು ಅಂತ ಅಂದುಕೊಂಡನ, ಹೇಗೆ ಬರೀಬೇಕು ಏನನ್ನ ಬರೀಬೇಕು, ಎಷ್ಟು ಬರೀಬೇಕು ಹೀಗೆ ಬಾರಿ ತಲೆ ಕೆಡಿಸಿಕೊಂಡು ಬಿಟ್ಟೆ. ಮೊದ್ಲೆ ನಂದು ಸೊಟ್ಟ ಕಾಲು, ಸೊಟ್ಟ ತಲೆ, ಅಂತದ್ರಲ್ಲಿ ತಲೇಲಿ ಏನಾದ್ರು ಇತ್ತಾ ಮುಗೀತು. ದೊಡ್ಡ ಮಂಡೆ(ನನ್ನ ಗೆಳತಿ ಸ್ವಾತಿ ಅಂತ, ಅವಳು ಯಾವಾಗ್ಲು   ನಂದು ದೊಡ್ಡ ಮಂಡೆ ಅಂತ ಚೇಡಿಸ್ತಾ ಇದ್ಲು, ಅದಕ್ಕೆ ನಾನು ರೇಗೋದು. ಯಾವಾಗ್ಲು ಕಿತ್ಲಾಡ್ತ ಇದ್ವಿ.) ಹಾಳಾಗಿ ಹೋಯಿತು. ತೇಟ್ ಹುಚ್ಚೂರಾಯನೆ, ಅನುಮಾನಾನೆ ಇಲ್ಲ, ಅದೂ ಈ ಸರಿ ಸ್ವಲ್ಪ ವಿಕೋಪಕ್ಕೆ ಕೂಡ ಹೋಗಿತ್ತು. ಒಂದು ದಿನ ಬೆಳಗ್ಗೆ ಎದ್ದೋನೆ ಸೀದ ಬೀಚಿಗೆ ಹೋಗಿ ಕೂತಿದ್ದೆ, ಅವತ್ತು
ನಾನು ಸೂರ್ಯೋದಯ ನೋಡೋಣ ಅಂತ ಹೋದೋನು,
ನೋಡ್ತೀನಿ ಎಷ್ಟೇ ಹೊತ್ತಾದ್ರೂ ಸೂರ್ಯ ಕಾಣಿಸ್ಲೇ ಇಲ್ಲ,
ಆದ್ರು ಬೆಳ್ಕು ಕಾಣ್ತ ಇತ್ತು. ಇದೇನಪ್ಪ ಆಯ್ತು ಅಂತ ನೊಡಿದ್ರೆ ಸೂರ್ಯ ಹಿಂದ್ನಿಂದ ಬರ್ತಾ ಇದ್ದ.
ಆಗ ಗೊತ್ತಾಯ್ತು ಹೌದಲ್ವ
ಇದು ಸೂರ್ಯ ಮುಳುಗೋ ದಿಕ್ಕು, ಸೂರ್ಯ ಹೂಟ್ಟೋ ದಿಕ್ಕು ಅಲ್ಲ ಅಂತ.
ಹಾಗಂತ ಮೊದ್ಲೆ ಗೊತ್ತಿರ್ಲಿಲ್ಲ ಅಂತಲ್ಲ ಇದೆ ಬೀಚಿಗೆ ದಿನಾ
ಸಂಜೆ ಬರೋನು ನಾನು.
ಈ ವಿಷ್ಯ ಅದೇಗೊ ಏನೋ ನಮ್ ಮೃಣನ್ಮಯಿಗೆ ತಿಳ್ದು ಬಿಡ್ತು. ಅದ್ಕೆ ಅವ್ಳು ಏನು, ಏನು ಅಂತ ಪೀಡಿಸಿ ಪೀಡಿಸಿ, ಕಡೇಗೆ ಅವ್ಳಿಗೆ ಹೇಳಲೇಬೇಕಾಯ್ತು. ಅದು ನಾನು ಕತೆ ಬರಿಬೇಕು ಅಂತ ಅಂದ್ಕೊಂಡಿದ್ದೀನಿ. ಅದಕ್ಕೋಸ್ಕರ ಅದಕ್ಕೆ ಬೇಕಾಗಿರೋ ವಸ್ತು, ಅದೂ ಇದೂ ಅಂತ ಹುಡ್ಕುತಾ ಇದ್ದೀನಿ ಅಂತ ಹೇಳಿಬಿಟ್ಟೆ. ಎಲ್ಲೋ ಆತ್ಮಹತ್ಯೆ ಮಾಡ್ಕೊತಾಯಿದ್ದೀನಿ ಅಂತಾ ಹೇಳಿದ್ನೇನೊ ಅನ್ನೋರೀತೀಲಿ ಊಹೂಃ ನೀನು ಕತೆ ಬರಿ ಬಾರ್ದು ಅಂದ್ರೆ ಬರಿಬಾರ್ದು ಅಂದು ಬಿಟ್ಲು. ಇದೇನಾಯ್ತಪ್ಪಾ ಹೀಗೆ ಅಂತ ಮಂಡೆ ಬಿಸಿ ಆಗಿಹೋಯ್ತು. ಯಾವಾಗ್ಲು ಅದು ಬರೆದೆ, ಇದು ಬರೆದೆ ಅಂತ ಹೇಳಿದಾಗ ಖುಶಿಯಿಂದ ಹೂ ಬರಿ ಅಂತ ಹೇಳ್ತಾ ಇದ್ದೋಳು. ಈಗೇನಾಯ್ತು ಅಂತ ಯೊಚ್ಸಿ ಯೋಚ್ಸಿ ಮಂಡೆ ಬೆಚ್ಚಾಯ್ತು.

ಕತೆ ಬರೀಬೇಕು ಅನ್ನೋದು ಮರ್ತೇ ಹೋಯ್ತು. ಮತ್ತೆ ಆ ಕತಾ ವಸ್ತು, ಅದು ಇದೂ ಎಲ್ಲಾನು ಮರ್ತು ಹೋಯ್ತು. ಅಲ್ಲಿ ಉಳಿದದ್ದು ಮಾತ್ರ ಇವ್ಳಿಗೇನಾಯ್ತು, ಯಾಕೆ ಹಿಗಾದ್ಲು, ಕತೆ ಬರೆದೀರ ಅಂದ್ರೆ ನಿಮ್ಮನ್ನು ಬಿಟ್ಟು ಹೊರಟು ಹೋಗ್ತೀನಿ ಅನ್ನೋ ಮಟ್ಟಕ್ಕೆ ಹೋದ್ಲಲ್ಲ. ಇದ್ರಲ್ಲಿ ಏನೋ ಚಿದಂಬರ ರಹಸ್ಯ ಅಡಗಿದೆ, ನಾನು ಕತೆ ಬರಿತೀನಿ ಅಂದರೆ ಬೇಡ ಅಂತ ಹೇಳ್ತಾ ಇದ್ದಾಳೆ ಅಂದರೆ ಏನೋ ಇದೆ, ಏನಿರಬೊಹುದು. ಇರ್ಲಿ, ನಾನು ಏನೇ ಆದ್ರು ಕತೆ ಬರೀಲೆ ಬೇಕು ಅನ್ನೋ ಮಟ್ಟಕ್ಕೆ ಹೋಗಿಬಿಟ್ಟೆ . ಇವಳೇನು ಮಾಮೂಲೀನ, ಜಗ ಮಂಡಿ ಇವಳೂ ಹಟಕ್ಕೆ ಬಿದ್ಲು. ಕಡೇಗೆ ಯಾವಮಟ್ಟಕ್ಕೆ ಹೋಯ್ತು ಅಂದರೆ ಕತೆ ಬೇಕ, ನಾನು ಬೇಕ ಅಂತ ಕೇಳೋ ಮಟ್ಟಕ್ಕೆ ಹೊಗಿಬಿಟ್ಟಾಗ " ನಿನ್ನಜ್ಜಿ, ನಿಂಗೇಳ್ದೆ ನೋಡು ನನ್ನೆಕ್ಡ ತಗೊಂಡು ನಾನೆ ಹೊಡ್ಕೊಬೇಕು, ತಲೇಗೆ ಮೆಟ್ಟು ಕೇಳೋಳು ನೀನು" ಅಂತ ಕೋಪದಲ್ಲಿ ಅಂದುಬಿಟ್ಟೆ. ಕೋಪ ಮಾಡಿಕೊಂಡು ಬಿಟ್ಟಳು. ನಮ್ಮೋಳು ಸುಮ್ನೆ ಎಲ್ಲ ಅಳ್ತ ಕೂರಲ್ಲ. ಅವಳ ಕಡೆ ನೋಡಿದ್ರೆ ಸಾಕು ತೇಟ್ ಕಾಳಿ ಮಾತಾನೆ, ದೇವಸ್ತಾನದಲ್ಲಿ ನೋಡೋದೆ ಬೇಡ ಅನ್ನೋ ಅಷ್ಟು ಕೋಪ. ಒಂದೆರಡು ದಿನ ಹಾಗೆ ಹೀಗೆ ಸುಮ್ಮನೆ ಇದ್ವಿ. ಎಷ್ಟು ದಿನ ಅಂತ ಸುಮ್ಮನೆ ಇರೋದು. ಪ್ರೀತಿಸಿದವಳು. ನಂಗೋ ಅವಳನ್ನ ಬಿಟ್ಟು ಮತ್ತಿನ್ಯಾರು ಇಲ್ಲ, ಅವಳನ್ನ ಬಿಟ್ಟು ಇರಲಿಕ್ಕೂ ಸಾದ್ಯಾನೇ ಇಲ್ಲ. ನಂಜೊತೆ ಅವ್ಳು, ಅವ್ಳ ಜೊತೆ ನಾನು ಮಾತಾಡದೆ ಇದ್ರೆ ಬದ್ಕೋಕೇ ಆಗೋಲ್ಲ ಅನ್ನೋ ಮಟ್ಟಕ್ಕೆ ಹೋದಾಗ ಇಬ್ಬರೂ ಒಂದು ಒಪ್ಪಂದಕ್ಕೆ ಬಂದ್ವಿ.  ಅವ್ಳು ನಾನು ಯಾಕೆ ಕತೆ ಬರಿಬಾರದು ಅಂತ ಹೇಳ್ತಾಳೆ ನಾನು ಕತೆ ಬರಿಬಾರ್ದು. ಇದು ಒಪ್ಪಂದ. ಸರಿ ಅಂತ ಅವ್ಳು ಕತೆ ಹೇಳಲಿಕ್ಕೆ ಶುರು ಮಾಡಿದ್ಲು. ಅವ್ಳು ಹೇಳಿದ್ದು ಒಬ್ಬ ಕತೆಗಾರನ ಕತೇನ. ಅವರ ಊರಲ್ಲಿ ಮೋಹನ ಅಂತ ಒಬ್ಬ ಹುಡ್ಗ ಇದ್ನಂತೆ. ನೋಡಲ್ಲಿಕ್ಕೆ ಲಕ್ಷಣವಾಗಿ, ಸ್ವಲ್ಪ ತುಂಬ ಅನ್ನೋ ಅಷ್ಟೆಲ್ಲಾ ಓದ್ಕೊಂಡು ಎಲ್ಲಾ ಮಾಡಿದ್ನಂತೆ, ಅವ್ನು ಹೀಗೆ ಒಂದು ದಿನ ಕತೆ ಬರಿತಾ ಇದ್ದೀನಿ ಅಂತ ಹೇಳಿ ಕತೆ ಬರಿತಾ ಇದ್ದೋನು, ಇದ್ದಕ್ಕಿದ್ದಂತೆ "ಶಂಕರಪ್ಪ ಶಂಕರಪ್ಪ ಅಂತ ಕೂಗ್ತ ಕೂಗ್ತ ಹೊರ್ಟು ಹೋದ್ನಂತೆ. ಆಮೇಲೆ ಎಲ್ಲಾರು ಹೇಳ್ತಾರೆ, ಅವ್ನು ಕತೆ ಬರ್ಯೋಕೆ ಶುರುಮಾಡಿದ್ಮೇಲೆ, ಅದ್ರಲ್ಲಿರೊ ಶಂಕರಪ್ಪ ಅಂತ ಇರೋ ಪಾತ್ರ ಒಂದು ಎದುರಿಗೆ ಬರೋಕೆ ಶುರು ಆಯ್ತಂತೆ. ಆಮೇಲೆ ಅದು ಮಾತ್ನಾಡ್ಲಿಕ್ಕೆ ಆರಂಭ ಆದ್ಮೇಲೆ ಅದ್ರ ಜೊತೆ ಮಾತಾಡ್ತ ಮಾತಾಡ್ತ ಅದ್ರ ಜೊತೆ ಹೊರ್ಟು ಹೋದ್ನಂತೆ. ಆದ್ರಿಂದ ಇವ್ಳು ನಂಗೆ ಯಾವ್ದೆ ಕಾರ್ಣಕ್ಕೂ ಕತೆ ಬರೀಬಾರದು ಅಂತ ಹೇಳಿಬಿಟ್ಟಿದ್ದಳು.

ಅವ್ಳ ಮಾತು ಮೀರೋಕೆ ಆಗುತ್ತ. ಪ್ರೀತ್ಸಿದ ಹುಡ್ಗಿ ಹೇಳಿದ ಮಾತನ್ನ. ಅದೂ ಮೊದ್ವೆ ಆಗೋಕೂ ಮುಂಚೆ. ಸಾದ್ಯಾನೆ ಇಲ್ಲ. ಅದೂ ನನ್ನ ಹುಡುಗಿ ತುಂಬಾ ಚೆನ್ನಾಗಿದ್ದಾಳೆ. ಪುಟ್ಟ ಪುಟ್ಟ ಕಾಲುಗಳು. ಬುಡ್ಡಕ್ಕೆ, ಗುಂಡಾಗಿ,ಮುದ್ದು ಮುದ್ದಾಗಿ ಇದ್ದಾಳೆ.ಆದ್ರಿಂದ ಅವ್ಳ ಮಾತು ಮೀರೋಕೆ ಆಗುತ್ತ. ನನ್ಕೈಲಂತು ಆಗೋಲ್ಲ. ಅದ್ಕೆ ಕತೆ ಬರೀಲಿಲ್ಲ. ಅದ್ರೆ ಆ ಮಹನುಬಾವ ಅದೆ ಆ ಮೋಹನ ಅನ್ನೊ ಬಡಪಾಯಿ ಇದ್ದನಲ್ಲ ಅವನ ಕತೆ ಇನ್ನೆಂತಾದು ಅಂತ ಓದೋ ಕುತೂಹಲ ಆಯ್ತು. ಈ ಸರಿ ಅವ್ಳಿಗೆ ಹೇಳಿದ್ರೆ ಮತ್ತಿನ್ನೇನ್ ಕತೆ ತೆಗಿತಾಳೊ ಅಂತ ಸ್ವಲ್ಪ ಗಾಬರಿ ಆಗಿ ಅವ್ಳಿಗೆ ಹೇಳದೇನೆ ಹೊರ್ಟುಬಿಟ್ಟೆ. ಆ ಶಂಕರಪ್ಪ ಅನ್ನೋ ಪಾತ್ರ ಇನ್ನೇಗಿರ್ಬೇಕು, ಅದೇನಾದ್ರು ಚಂದ್ರಮುಕೀನ ಅತ್ವ ನಾಗವಲ್ಲೀನ ಅನ್ನೋಮಟ್ಟಿಗೆ ಕುತುಹಲ ಕೆರಳಿ ಅವನ ಮನೇಗೆ ಹೋದಾಗ, ಅದು ಪಾಳು ಬಿದ್ದು ಹೋಗಿತ್ತು. ಯಾವುದೊ ಓಬಿರಾಯನ ಕಾಲದ್ದು ಅಂತ ಅನ್ನಿಸುತ್ತೆ, ಆ ಗುಹೆ ತರ ಇರೊ ಮನೇಲಿ ಹೋಗಿ ನೋಡ್ದಾಗ ಎಲ್ಲೂ ಕಾಣಿಸದೆ ಒಂದು ಹಳೇ ಟ್ರಂಕ್ ಅಲ್ಲಿ ಈ ಕತೆ ಬರ್ದಿರೊ ಕಾಗದಗಳನ್ನ ಇಟ್ಟಿದ್ದ(ಹಳೇ ಬ್ಲಾಕ್ ಅಂಡ್ ವೈಟ್ ಸಿನಿಮಾನ ಸ್ವಲ್ಪ ನೆನಪು ಮಾಡ್ಕೊಳಿ) ಇಗೊ ಅದೆ ಈ ಕತೆ. ಕತೆಗಾರ ಬರೆದಿರೋ ಕತೆಯ ಕತೆ.  ನಂಗಂತು ಕತೆ ಬರೀಲಿಕ್ಕೆ ಆಗಲಿಲ್ಲ, ಕಡೆ ಪಕ್ಷ ಈ ಕತೆನಾದ್ರು ನೊಡುವ. ಮುಂದೆ ಬರೋ ಪಾತ್ರ ಹಾಗು ಕತೆ ಎಲ್ಲಾನು ಮೋಹನ ರಚಿಸಿದ್ದು.

ಈಗ ಕತೆ ಆರಂಭ.


"ಎಲೆ ಹಾಕ್ಲ"
ಹಾಕೋ ಎಲೇನ ಎಲ್ಲಿ ಜೋಡಿಸ್ಕೋಬೇಕು ಅಂತ ಆಲೋಚಿಸ್ತಾನೆ, ಮೋಟು ಬೀಡಿ ಸುಡ್ತ ಒಂದು ಧಮ್ ಎಳೆದು ಹಾಯಾಗಿ, ಬಿದ್ದ ಎಲೇನ ತಂಗ್ಬೇಕಾದ್ದೆ ಹಾಕಿದಾನೆ, ಹುಚ್ಚುಮುಂಡೇಗಂಡಂಗೆ ಆಟಾನೆ ಗೊತ್ತಿಲ್ಲ, ನಾ ಗೆಲ್ಲಿ ಅಂತಾನೆ ಎಲೆ ಹಾಕ್ತಾರೊ ಏನೋ ಅಂತೇಳಿ, ತಾ ಗೆದ್ದದ್ದು ಗೊತ್ತಾಗಿ, ಈ ಆಟ ಗೊತ್ತಿಲ್ದೆ ಇರೊ ಮುಂಡೆಗಂಡರತ್ರ ಆಡಿ ಗೆದ್ದಾಗ , ನಿಜವಾಗಿ ನಾ ಗೆದ್ದನೋ ಅಥ್ವಾ ಅವ್ರು ಸೋತಿದ್ದೋ ತಿಳೀದೆ ಆಗಿ ಮತ್ತೊಂದ್ ಆಟಕ್ಕೆ ಎಲೆ ಕಲ್ಸೋಕ್ಕೆ ಸಿದ್ದ ಆದ ಶಂಕರಪ್ಪಂಗೆ ಮಗ ಬಂದಿರೋದು ಗೊತ್ತಾಗಿ, ಕುಲಪುತ್ರ, ವಂಶೋದ್ದಾರಕ ಬಂದಿದಾನೆ ಅಂತ ಸಂತೋಷ ಆದ್ರೂನು, ಅವನನ್ನ ನೋಡಿ ಹಾಗೆ ಸ್ಲೋ ಮೋಷನ್ನಲ್ಲಿ ಹೋಗಿ ತಬ್ಕೋಬೇಕು ಅಂತ ಅನ್ನಿಸಿದ್ರೂ, ಚೆನ್ನಾಗಿರೋ ಆಟ ಬಿಟ್ಟುಹೋಗಲಿಕ್ಕೆ ಆಗದೆ ಇಸ್ಪೀಟು ಎಲೆಗಳ ಮದ್ಯೆ, ಮಿದುಳು ಮನಸ್ಸು, ದೇಹ ಮೂರೂ ಬೇರೆ ಬೇರೇನೋ ಒಂದೇನೋ ಅಂತ ಯಾವ್ದೇ ಕಾರ್ಣಕ್ಕು ಆಲೋಚಿಸ್ದೆ ಎಲ್ಲಾನು ಏಕೀಭವಿಸಿ ಆಟದಲ್ಲಿ ತಲ್ಲೀನನಾಗಿಹೊದ.

ಮಾಕಾಹಳ್ಳಿ ನನ್ನೂರು,
ಈ ಮಾಕಾಹಳ್ಳೀಲಿರೋ ಹಲವು ಪಾತ್ರಗಳಲ್ಲಿ ಒಂದಾದ ಶಂಕರಪ್ಪನ್ನ ಕಂಡು, ಮಾತ್ನಾಡಿ, ಜೊತ್ಗೆ ಸೇರೇ ತಿಳೀಬೇಕು ಅತನ ಗತ್ತು, ಗಮ್ಮತ್ತು, ಪುರುಸೊತ್ತು. ವೃತ್ತಿಯಿಂದ ಮೇಷ್ಟ್ರಾಗ್ಗಿದ್ದಕ್ಕೆ ನಿಲ್ಲೋದಕ್ಕೆ ಒಂದು ಜಾಗಾ ಅಂತ ಇಲ್ದೆ, ಆ ಊರು, ಈ ಊರು ಮತ್ಯಾವ್ದೋ ಊರು, ಹೀಗೆ ತಾನೂ ಸುತ್ತುತ್ತಾ ತನ್ನ ಸಂಸಾರಾನು ಸುತ್ತಿಸ್ತಾ ಕಡೇಗೆ ವೃತ್ತಿಯಿಂದ ನಿವೃತ್ತಿ ಅಂತ ಆದಮೇಲೆ ವೃತ್ತಿ ಇಂದ್ಬಂದ ವರ್ಮಾನಕ್ಕೆ ಪ್ರತಿರೂಪ್ವಾಗಿ ತಾ ಹುಟ್ಟಿದ್ ಊರಲ್ಲಿ, ಅದೆ ಈ ಮಾಕಾಹಳ್ಳೀಲಿ ಮನೆ ಕೊಂಡು ರಾತ್ರಿ ಹೋತ್ತು ನಾಟ್ಕ ಆಡಿಸ್ತಾ, ಸಂಜೆ ಮೋಟುಬೀಡಿ ಸುಡ್ತಾ, ಇಸ್ಪೀಟು ಎಲೆಗಳ ಮದ್ಯ ಬೆರ್ತು ಮಾಕಾಹಳ್ಳಿಯ ಎಲ್ಲಾ ಪಾತ್ರಗಳೊಂದಿಗೂ ಸಂಭಂಧದಲ್ಲಿ ಇದ್ದೂ, ಯಾವ ರೀತಿಯ ಸಂಬಂದ ಎಂದು ತಿಳಿಯುವ ಯಾವಾ ಗೋಜಿಗೂ ಹೋಗದೆ ಇದ್ದು ಬಿಟ್ಟಿದ್ದಾ.

ಹೀಗೆ ಶಂಕರಪ್ಪ ಯಾವುದೊ ಕಾರಣಕ್ಕೆ ಅಂತ ಬೆಂಗಳೂರಿಗೆ  ಹೋಗಿದ್ದ. ಹಲವು ದಿನಗಳ ನಂತರ. ಈಗ ಕಂಡ.
ಸುಮ್ಮನೇ ನಡೀಬೋದಿತ್ತೇನೋ ಮುಖ ತೀರ ಬಾಡಿದ ಹಾಗಿದೆ, ಇಷ್ಟು ದಿನಗಳಿಂದ ಅವನಲ್ಲಿ ಏನೇನು ಆಯ್ತು ಅಂತ ನಾ ಊಹಿಸಿ ಹೇಳಿದ್ರೆ ತಪ್ಪಾಗುತ್ತೋ ಏನೋ, ಛೇ ಇರ್ಲಿಕ್ಕಿಲ್ಲ, ಎಲ್ಲಾರೂ ಮಾಡೋದು ಹಾಗೆ ಅಲ್ವ. ಅವನ ತಲೇಲಿ ಅದು ನಡಿತೂ ಇದು ನಡಿತೂ ಅಂತ ಹೇಳಿದ್ರೆ ನಿಜಾ ಆಗುತ್ತೋ ಸುಳ್ಳಾಗುತ್ತೋ?

ಇಲ್ಲ ಕಂಡಿತವಾಗಿಯೂ ಇಲ್ಲ. ಯವುದೋ ಒಂದು ಘಟನೆಯಿಂದ ಈತನಿಗೆ ಹೀಗೆ ಆಗಿರಲಿಕ್ಕೆ ಸಾದ್ಯವಿಲ್ಲ.
ಒಟ್ಟೂ ಬದುಕನ್ನ ತನ್ನ ಎದುರಿಗೆ ಇಟ್ಟುಕೊಂಡು ಎದುರಿಗಿದ್ದದ್ದನ್ನ ಕಂಡನ?
ಅಥವ ಕಾಣಲಿಕ್ಕೆ ಪ್ರಯತ್ನಿಸಿದನ ಅಂತ? ಇರಬೊಹುದೇನೋ,
ಆದರೆ ಆತನಿಗೆ ಕಾಣಲಿಕ್ಕೆ ಸಾದ್ಯವಾಯಿತ
ಅನ್ನೋದರ
ಜೊತೆಗೇನೆ
ಕಾಣಬೇಕೇಕೆ ಅನ್ನೋದು ಉತ್ತರವೊ ಪ್ರಶ್ನೆಯೋ ಗೊತ್ತಾಗಲಿಲ್ಲ.
ಈ ಸಮಯದಲ್ಲಿ  ಇದು ಅವಶ್ಯವಿತ್ತ ಅಂತ ಅನ್ನಿಸುತ್ತೆ. ಸಣ್ಣ ಸಣ್ಣ ಘಟನೆಗಳನ್ನ ಒಟ್ಟಾಗಿ ಸೇರಿಸಿ ಕೂತು ಕಂಡನ?

ಒಬ್ಬ ಕತೆಗಾರನಾಗಿ ಈ ಕತೆಯನ್ನ ಬರೆಯುತ್ತ ನನಗೆ ಕಾಡುವುದು,
ಪ್ರತೀ ಕ್ಷಣವೂ ನಡೆದುಹೋದ ಆ ಬಿಡಿ ಬಿಡಿ ಕ್ಷಣಗಳನ್ನು ಒಟ್ಟುಗೂಡಿಸಿ ನೋಡಿದ ಒಂದು ದೃಷ್ಟಿಯೆ?
ಅಷ್ಟೆ ಅಲ್ಲವ,
ಪ್ರತೀ ಕ್ಷಣವನ್ನು ಒಟ್ಟುಗುಡಿಸುವುದಾದರೂ ಹೇಗೆ?

ಈಗ ಅನಿಸುತ್ತೆ ಎಷ್ಟು ಆರಾಮಾಗಿ ಶಂಕರಪ್ಪ ಬದುಕು ಸಾಗಿಸಿಬಿಟ್ಟ ಅಂತ. ಆರಾಮಾಗಿ, ಮೇಷ್ಟ್ರಾಗಿ ಪಾಠ ಮಾಡುತ್ತ ಮಾಡುತ್ತ, ತುಂಡು ಬೀಡಿ ಸುಡ್ತ, ಇಸ್ಪೀಟ್ ಆಡ್ತ ಆಡ್ತ ಹೀಗೆ ಬದುಕು ಸಾಗಿಸಿಬಿಟ್ಟ.
ಅವ್ನು ಪ್ರಶ್ನೆಗಳ ಮಗ್ಗೆ ಯೋಚಿಸಿದನ ಗೊತ್ತಿಲ್ಲ.
ಆದರೆ ಬದುಕಿಬಿಟ್ಟ.
ಇಲ್ಲಿವರೆಗೂ ಆರಾಮಾಗೇ ಇದ್ದಾನೆ, ಅಥವ ಇದ್ದಾನೆ ಅಂತ ನಾನು ಬಾವಿಸಬೇಕಿದೆ ಅಂತ ಅನ್ಸೊತ್ತೋ ಏನೋ.
ನಾನೂ ಹಾಗೆ ಬದುಕಬೊಹುದಿತ್ತಲ್ಲ, ಅರ್ಥಗಳ ಇರಾದೆ ಬೇಕಿತ್ತ,
ಆದರೆ ನಾನು ಹಾಗೆ ಇರಬಲ್ಲವನಾಗಿದ್ದೆನ?  ಅಯ್ಯೋ...
ಎಲ್ಲವನ್ನು ಎಲ್ಲಾ ಕ್ಷಣವನ್ನೂ ಒಟ್ಟುಗೂಡಿಸಲೇ ಇಲ್ಲವಲ್ಲ, ಒಟ್ಟುಗೂಡಿಸಲಿಕ್ಕೆ ಆಗಲೇ ಇಲ್ಲವಲ್ಲ, ಇದು ನನ್ನ ಸೋಲ..? ಅಥವ ಒಟ್ಟುಗೂಡಿಸಬಲ್ಲೆ ಅಂತ ಅಂದುಕೊಂಡಿದ್ದರಲ್ಲಿ ಸೋಲಿತ್ತ..? ಅಥವ ಎಂದಿಗೂ ಕ್ಷಣಗಳನ್ನ ಒಟ್ಟುಗೂಡಿಸಲು ಸಾದ್ಯವೇ ಇಲ್ಲವ..? ನನ್ನಿಂದ ಮಾತ್ರ ಸಾದ್ಯವಿಲ್ಲವ..? ಯಾರಿಂದಲೂ ಸಾದ್ಯವಿಲ್ಲವ..? ಎಲ್ಲಿಂದಲೂ ಯಾರಿಂದಲೂ ಸಾದ್ಯವಿಲ್ಲದಾದರೆ ಅದು ಇರುವುದಾದರೂ ಉಂಟ...? ಛೆ... ಬಿಡಿ
ಇವೆಲ್ಲ ಶಂಕರಪ್ಪನ್ನ ಕಾಡಿತ್ತ...? ಇರಲಾರದು, ಇಲ್ಲ ಇರಬೊಹುದು.
ನನಗೆ ಕಾಡಿದ್ದು ಅವನಿಗೂ ಕಾಡಬೇಕೇಕೆ..? ಅಥವ ನನಗೆ ಕಾಡಿದ್ದು ಅವನಿಗೂ ಕಾಡಬಾರದೇಕೆ..?

ಶಂಕ್ರಪ್ಪ ನಡೀತಾ ಇದ್ದಾನೆ, ಮುಂದೇ ಹೋಗ್ತಾ ಇದ್ದಾನೆ. ದೊಡ್ಡ ದೊಡ್ಡ ಕಟ್ಟಡಗಳು, ಜನಗಳು ನಡೀತ ಇದ್ದಾರೆ. ಎದುರಿಗೆ ಏನನ್ನೋ ಮಾರ್ತ ಇರೋ ಮುದ್ಕಿ, ಅಲ್ಲಿ ಅಲ್ಲಿಗೇಕೆ ಹೋಗ್ತಾ ಇದ್ದನೇ, ಟ್ರಾಫಿಕ್ ಬೇರೆ,
ಪಾಪ ಶಂಕ್ರಪ್ಪ
"ನೋಡಿದ್ಯ ಆ ಪಾಪುನ, ತೈ ತೈ ತಕ್ಕ ಅಂತ ಕುಣೀತಿರೋದು ನೋಡಿ"
" ಅಯ್ಯೊ ಅದಕ್ಕೆ ಆ ಕಾರು ಗುದ್ದತ್ತೆ"
" ಮರಿ ಸ್ವಲ್ಪ ಪಕ್ಕ ಬಾಮ್ಮ"
ಶಬ್ದ ಶಬ್ದ ಬರೀ ಶಬ್ದ ನಾನೂ ನೋಡ್ತಾನೇ ಇದ್ದೀನಿ
ನಿಂತು ಹೋದ ಕಾಲದಲ್ಲಿನ ಚಿತ್ರಗಳಾಗಿ
ಇಡೀ ವಾತವರಣ ಇದೆ. ಇದನ್ನೆಲ್ಲಾ ನೋಡ್ತಾ ಇದ್ದಾ ಶಂಕರಪ್ಪ ಒಮ್ಮೆ ಜೋರಾಗಿ ಉಸಿರೆಳೆದುಕೊಂಡು ಕುಸಿದು ಬಿದ್ದ.

"ಶಂಕ್ರಪ್ಪ ಹುಷಾರು, ನಾ ಬಂದೆ"    

ಛೇ, ಇದೇನಾಯ್ತು, ಮಾಕಾಹಳ್ಳಿ ನಾ ಹುಟ್ಸಿರೋ ಊರು, ಅದ್ರಲ್ಲಿ ಬರೋ ಪಾತ್ರ ಶಂಕರಪ್ಪ. ಅದನ್ನೂ ನಾನೆ ಹುಟ್ಸಿದ್ದು.ನಿರ್ಲಿಪ್ತವಾಗಿ ಆತನನ್ನ ಚಿತ್ರಿಸ್ಬೇಕು, ಯಾಕೆ? ನನ್ಕಣ್ಣೆದುರೀಗೆ, ನಾ ಬರೀತಿದ್ದಾಗ ಆತ ಬೀಳ್ತಾ ಇದ್ದಾನೆ. ನಾ ನೋಡ್ತಾ ಇದ್ದೀನಿ. ಛೇ, ಇಷ್ಟಕ್ಕೂ ಈ ಪರಿಸ್ಥಿತೀಲಿ, ಹೋ ನನ್ನ ಪರಿಸ್ಥಿತಿ, ನಾನಿದಿನಿ ಈಗ ಇಲ್ಲಿ. ಬೀದಿ ಇದು, ಬಿಕಾರೀ ತರ ಕೂತಿದೀನಿ. ತರ ಏನ್ಬಂತು ಬಿಕಾರೀನೆ. ನೆನ್ನೇ ನೆನ್ಪೇ ಇಲ್ಲ, ನಾಳೆ ಕನ್ಸೇ ಇಲ್ಲ. ಸಂದಿ ಗೊಂದಿ ಸುತ್ತಿ ಈಗ ಇಲ್ಲಿ ಕೂತಿದ್ದಿನಿ ಅಂತಾದ್ರಲ್ಲಿ, ........
ಶಂಕ್ರಪ್ಪ ಹೊರ್ಟೋಗ್ತಾ ಇದ್ದಾನೆ,ನಾ ಅವ್ನ ಹಿಂದೆ ಹೋಗ್ತಾ ಇದ್ದಿನೀ.
ನನ್ನ ಕೈ ತಪ್ಪಿ ಹೋಗಿದೆ. ಪಾತ್ರ ಸ್ವತಂತ್ರ್ಯವಾಗಿ ಹೋಗಿದೆ.
ಅರೆ , ಐ, ದೇಹ ಬಂತು, ಜೀವಾನು ಬಂತು, ಮಾತಾಡ್ತಾ ಇದೆ.
ನನ್ನ ಪಾತ್ರ ನಂಗೇ ಕೇಳೋ ರೀತೀಲಿ ಮಾತಾಡ್ಕೊಂಡು ಹೊರ್ಟೋಗ್ತಾ ಇದೆ.
ನಾನು ನಾನು ನಾನು ಅದರ ಹಿಂದೆ ಹೋಗ್ತಾ ಇದ್ದೀನಿ.
ನನ್ನ ಕೈ ತಪ್ಪಿ ಹೋದ ಪಾತ್ರವನ್ನ ನಿರ್ದೇಶಿಸ್ತಾ ಇರೋರು ಯಾರು ಅಂತ ಚಿಂತಿಸೋಕೆ ಈಗ ನಂಗೆ ಸಮ್ಯಾನೆ ಇಲ್ಲ.
ಈಗ ಮಾಡೋದೇನಿದ್ರು ಶಂಕರಪ್ಪನ್ನ ಹಿಂಬಾಲಿಸೋದು, ಹಾಗು ಅವ್ನ್ ಹೇಳಿದ್ದನ್ನ ಕೇಳೋದು ಅಷ್ಟೆ.
ಹಾ, ಅವ್ನು ಮುಂದೆ ಹೋಗ್ತಾ ಇದ್ದಾನೆ, ನಾ ಹಿಂದೆ
ಹೋಗ್ತ ಇದ್ದೀನಿ,
ನಾನೆ ಹುಟ್ಸಿದ ಪಾತ್ರದ ಹಿಂದೆ.

ಶಂಕ್ರಪ್ಪ ಮಾತಾಡ್ತಾ ಇದ್ದಾನೆ ನಾನು ಕೇಳ್ತಾ ಇದ್ದೀನಿ,

"ಹೌದು ನಾನು ಕುಸೀತಾ ಇದ್ದೀನಿ. ಪಾತಾಳಕ್ಕೆ ಭಯಂಕರವಾಗಿ ಕುಸೀತಾ ಇದ್ದೀನಿ. ಕೈಗಳಿಗೆ, ಕಾಲುಗಳಿಗೆ ಏನೋ ಹಾಕಿ ಎಳೀತಾ ಇದ್ದಾರೆ. ಹಾ.., ಈಗ ಗೊತ್ತಾಯ್ತು ನಾನು ಸಾಯ್ತಾ ಇದ್ದೀನಿ ಅಂತ. ಛೆ ಛೆ ಇಲ್ಲ. ಸಾಯೋದು ಯಾರಿಗಾದ್ರು ಗೊತ್ತಾಗುತ್ತ, ಬಹುಶಃ ನಾನು ಸತ್ತು ಹೋಗಿದ್ದೀನಿ. ಬಹುಶಃ ನೂ ಇಲ್ಲ ಪಿಂಡಾನೂ ಇಲ್ಲ. ನಾನು ಸತ್ತೋಗಿದ್ದೀನಿ. ನಮ್ಮ ನಾಟ್ಕದಲ್ಲಿ ಇದೇ ರೀತಿ ಅಲ್ವ, ಸತ್ಯವಾನನ ಎದುರಿಗೆ ಯಮ ಕಾಣಿಸ್ಕೊಂಡಾಗ, ಆಗ ಆತಂಗೆ ಹೇಳ್ಕೊಟ್ಟಿದ್ದೆ ಏನೆಲ್ಲಾ ಮಾಡ್ಬೇಕು ಅಂತ. ಯಮನ್ನ ನಿಜ್ವಾಗಿ ನೋಡಿ ಬಂದಿದಾರೇನೊ ಅನ್ನೋ ರೀತಿ ಹೇಳಿ ಕೊಟ್ಟಿದ್ದಾರೆ ನಮ್ ನಾಟ್ಕದ್ ಮೇಷ್ಟ್ರು ಅಂತ ಅಂತಿದ್ರು. ಒಟ್ನಲ್ಲಿ ನಾನು ಈಗ ಸತ್ತಿದ್ದೀನಿ, ಅದೆ ಶಂಕ್ರಪ್ಪ ಅನ್ನೊ ಈ ವ್ಯಕ್ತಿ ಸತ್ತಿದ್ದಾನೆ. ಹೌದೂ, ಸತ್ತೋನ್ಗೂ ಹೆಸ್ರು ಅನ್ನೋದು ಇರುತ್ತ. ಇರ್ಲಿ ಬಿಡ್ಲಿ, ನಂಗೆ ಇನ್ಯಾರಾದ್ರು ಬಂದು ಹೊಸದಾಗೀ ಏನಾದ್ರು ಹೆಸ್ರು ಕೊಟ್ರೆ ಸರಿ ಇಲ್ಲಾಂದ್ರೆ ಇದೆ ಇರ್ಲಿ. ಎಷ್ಟು ಚಂದ ಇದೆ. ಲೇ ಶಂಕ್ರಾ ಅಂತ ಕರ್ದರೆ, ಕೇಳಿಸ್ಕೊಳ್ಲಲಿಕ್ಕೆ ಏನು ಆನಂದ ಅಂತೀರ. ಈಗ ನನ್ನ ಕರ್ಕೊಂಡು ಹೋಗ್ಲಿಕ್ಕೆ ಯಮ ಬರ್ತಾನೆ, ಇಲ್ಲ ಕಂಡೀತಾ ಇಲ್ಲ, ಅಲ್ಲಿ ಸಾವಿತ್ರಿ ಇದ್ಲು ಏನೋ ಎಡ್ವಟ್ಟಾಯ್ತು ಅದ್ಕೆ ಯಮಾನೆ ಬಂದ. ಇಲ್ಲಿ ಯಾರಿದ್ದಾರೆ, ಯಾರೂ ಇಲ್ಲ. ಹೌದು ಯಾರೂ ಇಲ್ಲ. ಅದೂ ನಾನೋ, ನಮ್ಮೂರ ಜಗುಲಿ ಆಂಜನೇಯಂಗೆ ಬಿಟ್ಟು ಮತ್ತೊಬ್ರಿಗೆ ನಮಸ್ಕಾರ ಹಾಕ್ಲಿಲ್ಲ, ಅಂತಾದ್ರಲ್ಲಿ ಗ್ಯಾರೆಂಟಿ ಯಮ ಬರ್ಲಿಕ್ಕಿಲ್ಲ. ಯಮ ಸೇವಕರು ಬರ್ಬೋದು. ಆದ್ರು ಯಮ್ಲೋಕ ಅದೆಂಗಿರುತ್ತೋ ನೋಡ್ಲೆ ಬೇಕು, ಯಾರ್ನಾದ್ರು ಕೇಳಿ ಅಲ್ಲೊಂದು ಮೋಟು ಬೀಡಿ ಇಸ್ಕೊಬೇಕು ಅಷ್ಟೆ. ಕಣ್ಣೇ ತೆಗೀಲಿಕ್ಕೆ ಆಗ್ತಾ ಇಲ್ಲ. ಹಾ ಈಗ ಆಯ್ತು. ಅರೆ ಯಮ್ಲೋಕ ಬೆಂಗ್ಳೂರಿನ್ ತರಾನೆ ಇದ್ಯಲ್ಲ"

"ಲೇ ಮುದ್ಕ ಏಳೋ ... ಎಲ್ಲಾರೂ ಬಿಕ್ಷೆ ಬೇಡೋವ್ರೆ ಆಗೋದ್ರು"

ಇದೇನಾಯ್ತು, ನನ್ನ ಪಾತ್ರ ಕೈ ತಪ್ಪಿದ್ದು ನಿಜ, ಈಗ ನೊಡಿದ್ರೆ ಹೊಸ ಪಾತ್ರಗಳು ಹುಟ್ತಾ ಇವ್ಯಲ್ಲ. ಅದೂ ಪೋಲೀಸಿನ ಪಾತ್ರ, ಇರ್ಲಿ ನೋಡುವ.

"ಸ್ವಾಮಿ ನಾನು ಶಂಕ್ರಪ್ಪ. ಚೆನ್ನಾಗಿದ್ದೀರ ಸ್ವಾಮಿ?"
"ಲೇ ಯಾವನ್ಲ ನೀನು?"
"ಇದು ಯಮಲೋಕ ಅಲ್ವ?"
"ಬೋಳೀಮಗ್ನೆ, ಬೆಂಗ್ಳೂರ್ನ ಹಿಡ್ಕೊಂಡು ಯಮಲೋಕ ಅಂತೀಯೇನೋ, ಎಷ್ಟು ಕೊಬ್ಬು ನಿಂಗೆ, ನಿಮ್ಮಂತಾವ್ರಿರೋದ್ರಿಂದಾನೆ ನಮ್ಮ ದೇಶ ಹಾಳಾಗ್ತ ಇರೋದು"
" ಓ ಹಂಗಾ ಸ್ವಾಮಿ, ದೇಶನ? ಯಾವ್ದೇಶ ಸ್ವಾಮಿ? ಹೌದೂ, ದೇಶ ಅಂದ್ರೇನ್ ಸಾಮಿ?"
"ಬೇವರ್ಸಿ ನನ್ಮಕ್ಳ, ಯಾವ ದೇಶಾ ಅಂತಾನು ಗೊತ್ತಿಲ್ವೇನೋ ನಿಂಗೆ? ಕಣ್ಣೆದ್ರಿಂದ ಈಗ್ಲೆ ಒಂಟು ಬಿಡು. ಕಾಣ್ಸಿದ್ರೆ ನೋಡು. ಅಮ್ಮಾ ಭಾರತ ಮಾತ ನೊಡಮ್ಮಾ ನಿನ್ನ ಮಕ್ಕಳನ್ನ, ಯಾವ ದೇಶಾ ಅಂತಾ ಕೇಳ್ತಾರಲ್ಲಮ್ಮ. ಕ್ಷಮಿಸು ತಾಯಿ, ಕ್ಷಮಿಸು. ಗಾಂದೀ, ಇಂತವ್ರಿಗಾಗೇನ ನೀನು ಸ್ವಾತಂತ್ರ್ಯ ತಂದ್ಕೊಟ್ಟದ್ದು"
"ಲೋ ಯಾವನ್ಲಾ ಅಲ್ಲಿ ನೋ ಪಾರ್ಕಿಂಗ್ ಪ್ಲೇಸ್ ಅಲ್ಲಿ ಗಾಡಿ ನಿಲ್ಲಿಸ್ದೋನು?"
"ಸ್ವಾತಂತ್ರ್ಯ ಅಂದ್ರೆ ಬೆಲೆ ಇಲ್ದಾಗೆ ಹಾಗಿದೆ ತಾಯಿ"
"ಗಾಡಿ ತೇಗೀಲ, ನಿಮ್ಮಪ್ಪಂದು ಅಂತ ಅಂದ್ಕೊಂಡಿದಿಯಾ ಜಾಗಾನ?"
"ಭಾರತ ಮಾತ, ಒಂದೇ ಮಾತರಂ"

"ಅನ್ಮಾನಾನೇ ಇಲ್ಲ, ಇದು ಯಮಲೊಕಾನೆ. ಇಲ್ಲಾಂದ್ರೆ ಯಾರಾದ್ರು ಗಾಂದೀ ಅಂತ ಕರೀತಾರ. ಹೌದೂ, ಈತ ಕರ್ದದ್ದು, ಅದೆ ಹಳೆ ಮಹಾತ್ಮ ಅಂತ ಕರೀತಾರಲ್ಲ ಆ ಗಾಂದೀನ್ನಾ ಅತ್ವಾ ಈ ಯಾವ್ಯಾವ್ದೋ ಗಾಂದೀಗಳಿದ್ದಾರಲ್ಲ ಅವರನ್ನ? ಛೆ ಅದಾದ್ರು ಸ್ವಲ್ಪ ಸ್ಪಷ್ಟ ಆಗಿದ್ದಿದ್ರೆ ಇದು ನಿಜ ಲೋಕಾನೊ, ಅತ್ವಾ ಯಮಲೋಕಾನೋ ತಿಳ್ದು ಹೋಗ್ತಾ ಇತ್ತು. ನಾವು ನಮ್ಮ ನಾಟ್ಕದಲ್ಲಿ ಯಮಲೋಕಕ್ಕೆ ಅಂತ ಎಷ್ಟೊಂದು ಹಣ ವ್ಯರ್ಥ ಮಾಡಿ ಸೆಟ್ ಹಾಕಿಸ್ತಾ ಇದ್ವಿ. ಯಮಲೋಕ ನಮ್ಮ ಬೆಂಗ್ಳೂರಿನ ತರಾನೆ ಇದ್ದಂಗೆ ಇರುತ್ತೆ ಅಂತ ಗೊತ್ತಿದ್ದಿದ್ರೆ, ಇಲ್ಲೆ ಕರ್ದುಕೊಂಡು ಬಂದು ನಾಟ್ಕ ಆಡಿಸ್ಬೋದಿತ್ತು."

ನಗು ಬರ್ತಿದೆ ನಂಗೆ, ಶಂಕ್ರಪ್ಪನ ಮಾತನ್ನ ನಿಲ್ಸೋಕೆ ಸಾದ್ಯಾನೆ ಇಲ್ಲ. ನಾನೆ ಬರಿತಿರೋ ಕತೆಯ(ಇದಕ್ಕೆ ಕತೆ ಅಂದರೆ) ನನ್ನದೇ ಊರಿನ ನನ್ನದೇ ಪಾತ್ರಾನೂ ನನ್ ಕೈ ಅಲ್ಲಿ ನಿಯಂತ್ರಿಸೋಕೆ  ಆಗ್ತ ಇಲ್ಲ ಅಂದ್ರೆ ಏನು ಅರ್ಥ? ಯಾವ್ದೋ ಒಂದು ಕ್ಷಣ
ಎಲ್ಲಾನ್ನು ನಾವೆ ಮಾಡ್ತ ಇದ್ರೂ ಸಹ ಎಲ್ಲೋ
ಅದು
ನಮ್ಮಿಂದ
ತಪ್ಪಿ ಹೋಗಿದೆ
ಅಂತ
ಅನ್ಸೋಕ್ಕೆ ಶುರು ಆಗುತ್ತೆ.
ಒಂಥರಾ ಆ ಶುರೂ ಸಹ ನಮ್ಮ ನಿಯಂತ್ರಣ
ತಪ್ಪಿ ಹೋಗಿರುತ್ತೆ.
ಕಾಲಕ್ಕೆ ತನ್ದೇ ಆದ ಒಂದು ಅಸ್ಥಿತ್ವ
ಅಂತ
ಇದ್ಯಾ
ಅಂತ
ಪ್ರಶ್ನೆ ಬಂದರೆ
ಮೊದ್ಲಿಗೆ ಕಾಲ ಅನ್ನೋದು ಇದ್ಯಾ ಅಂತ ಕೇಳ್ಕೋತೀವಿ, ಅಮೇಲೆ ತನ್ದೇ ಅನ್ನೋದು ಏನಾದ್ರೂ ಇದ್ಯ ಅಂತ ಕೇಳ್ಕೋತೀವಿ, ನಿಲ್ತೀವ ಇಷ್ಟಕ್ಕೆ, ಇಲ್ಲ, ಒಂದು ಅನ್ನೋದೊಂದಿದ್ಯಾ ಅಂತ ಕೇಳ್ಕೋತೀವಿ? ಆಮೇಲೆ ಅಸ್ಥಿತ್ವ ಅಂದ್ರೆ ಏನೂ ಅಂತ ಬರುತ್ತೆ.

ಯಾಕೋ ಶಂಕ್ರಪ್ಪ ಕೂಗ್ತ ಇದ್ದಾನೆ, ನಾ ಅವ್ನ ಹಿಂದೆ ಹೋಗ್ತ ಇದ್ದಿನಿ.
  
"ಹೌದು, ಯಾಕೋ ತುಂಬ ಅನುಮಾನ.
ನಾನು ಸತ್ತಿದ್ದೀನೋ ಇಲ್ವೋ ಅಂತ ಕೇಳೋಣ ಅಂದ್ರೂ ಯಾರೂ ಇಲ್ಲ ಇಲ್ಲಿ.
ಆದ್ರು ಇಷ್ಟುಬೇಗ ಸಾಯಬಾರದಾಗಿತ್ತು.
ಮಗ್ಳು ಗಾಯಿತ್ರೀನ ನೋಡ್ಬೇಕಿತ್ತು.ಮೊಮ್ಮಗ ಹೇಗಿದ್ದಾನೋ ಏನೋ.ಅವ್ಳ ಮದ್ವೇಗೆ ಅಂತ ಎಷ್ಟು ಮಾಡಿದೆ. ಸುಂದರಿ ಸತ್ತಾಗ ಅಳ್ಳೇ ಇಲ್ವಂತೆ, ಬಂದ ನೆಂಟರೆಲ್ಲಾ ಹೇಳಿದ್ರು. ಗಂಡ ಅಂತ ಅನ್ಸಿಕೊಂಡೋನು ಅಳೋದು ಬೇಡ್ವಾ ಅಂತ. ಅದೇನೊ ಆಗ್ಲು ತಿಳೀಲಿಲ್ಲ. ಈಗ್ಲು ತಿಳ್ದಿಲ್ಲ ಬಿಡಿ.ಮಗನ್ನ ನಾನೆ ಓದ್ಸಿದ್ದು. ಹೋಗ್ಲಿ ಬಿಡು, ಇದ್ದು ಮಾಡೋದೇನಿದೆ ಮತ್ತೆ"

ಅಲ್ಲೊಬ್ಬ ಕೂತಿದ್ದಾನೆ. ಎಷ್ಟೋದಿನದಿಂದಾನು ಅಲ್ಲೆ ಕೂತಿದ್ದಾನೆ. ಎರ್ಡೂ ಕೈಗಳಿಲ್ಲ. ನಾನು ನೋಡಿದ್ದೆ. ಆದ್ರೆ ಈ ಶಂಕ್ರಪ್ಪ ಯಾಕೆ ಅವ್ನತ್ರಾ ಹೋಗ್ತಾ ಇದ್ದಾನೆ

"ಮಗಾ ಊಟಾ ಮಾಡ್ದೇನಾ? ಓ ನಿಂಗೆ ಮಾತು ಬರೋಲ್ವ ಇರು"
ಊಟ ಎಲ್ಲಿ ಸಿಕ್ತು ಈತನಿಗೆ, ತೆಗೆದುಕೊಂಡು ಹೋಗಿ ತಿನ್ನಿಸ್ತಾ ಇದ್ದಾನೆ.

ಶಂಕ್ರಪ್ಪಾನೂ, ಆ ಕೈ ಇಲ್ಲದ ಬಿಕ್ಷುಕಾನು ಸಮ್ಮನೆ ಒಬ್ಬರನ್ನೊಬ್ಬರು ನೋಡ್ತ ಕೂತಿದಾರೆ. ಅರೆ ನೋಡ್ತಾ ಇದ್ದಾರೆ. ಈತ ಎದ್ದ. ಈ ಮನುಷ್ಯ ಇದನ್ನೆಲ್ಲಾ ನಂಗೇಕೆ ಹೇಳ್ತಾ ಇದ್ದಾನೆ, ಇಲ್ಲ, ಅದೂ ಇಲ್ಲ, ಈತ ನಂಗೆ ಹೇಳ್ತಾ ಇಲ್ಲ. ಮತ್ಯಾಕೆ ಹೇಳ್ತಾಇದ್ದಾನೆ. ಶಂಕರಪ್ಪಾಂಗು ಗೊತ್ತಿದ್ಯೋ ಇಲ್ವೋ? ಆತ ಮಾತಾಡ್ತ ಇರೋದನ್ನ ಬೇರೇಯವ್ರಾದ್ರು ಕೇಳ್ತಾ ಇದ್ದಾರ ಅಂತ? ಅದರ ಬಗ್ಗೆ ಅಷ್ಟೊಂದು ತಲೆ ಕೆಡ್ಸಿಕೊಂಡ ಹಾಗೆ ಕಾಣಿಸ್ತಾ ಇಲ್ಲ. ಅತ ಏನೋ ಹೇಳ್ಬೇಕು ಹೇಳ್ತಿದಾನೆ, ಅಷ್ಟೆ. ನಿಜ್ವಾಗಿ ಅಷ್ಟೇನ? ನನ್ಗಂತೂ ಈಗ ಗೊತ್ತಿಲ್ಲ.
ಕಾಲಕ್ಕೆ ರೂಪ ಅಂತ ಒಂದು ಕಂಡಿತವಾಗಿಯು ಇದೆ,
ಆದ್ರೆ
ಕಾಲ ಅದೆಷ್ಟು ಸ್ವತಂತ್ರವಾಗಿ ಹೋಗಿದೆ ಅಂದ್ರೆ ಅದ್ಕೆ ಪ್ರತಿ ರೂಪಾನೇ ಇಲ್ಲ. ನಂಗೆ ಅನ್ಸೊ ಮಟ್ಟಿಗೆ ಹೇಳೋದಾದ್ರೆ ಅದ್ಕೆ ಎಂದೂ ಪ್ರತಿ ರೂಪ ದಕ್ಕೋದಿಲ್ಲ. ಆದ್ರೆ ನಾವ್ಗಳು ರೂಪ ಕಾಣ್ತೇವ, ಕಾಣೋದಕ್ಕಾದ್ರು ಹಂಬಲಿಸ್ತೀವ, ಇಲ್ಲ. ನಮ್ಗೆ ಪ್ರತಿ ರೂಪಾನೆ ಬೇಕು. ಇಷ್ಟಕ್ಕೂ ಆದದ್ದಾರು ಏನು? ಅವ ಶಂಕರಪ್ಪ. ಅವ ಮಾತಾಡ್ತಾ ಇದ್ದಾನೆ. ಒಂದು ಹಂತದಲ್ಲಿ ಸುಮ್ಮನೆ ಮಾತಾಡ್ತ ಇದ್ದಾನೆ.
ಆದರೆ
ನಾನು ಅವನನ್ನು ಸುಮ್ಮನೆ ಹುಡುಕಿದ್ದ? ಇಲ್ಲ, ಒಂದು ತುಡಿತಕ್ಕೆ ಹುಟ್ಟಿಸಿದೆ. ಕಣ್ಣೆದುರಿಗಿನ ಪ್ರಪಂಚ ಒಟ್ಟಾಗಿ ಒಂದು ಸ್ಥಬ್ದಚಿತ್ರದಂತೆ ಕಂಡಾಗ ಭಯವಾಗಿ
ಜೀವ ಎಲ್ಲಿದೆ?
ಅಂತೇಳಿ ಹುಡುಕಾಟಕ್ಕೆ ಸಿಕ್ಕು ನರಳಿ ತೊಳಲಿದಾಗ, ಇಲ್ಲ ಈಗ ಇದು ಬೇಕು ಅನ್ನೋ ಮಟ್ಟಕ್ಕೆ ಹೋದಾಗ ಶಂಕರಪ್ಪನ್ನ ಸೃಷ್ಟಿಸಿದೆ. ಈಗ ಅದು ಸ್ವತಂತ್ರವಾಗಿದೆ. ಅದರ ಮಾತುಗಳನ್ನು ಕೇಳುತ್ತಾ ಕೇಳುತ್ತ ಹಲವು ಸಂಗತಿಗಳು ನೆನಪಾಗುತ್ತಲಿವೆ. ಆದ್ದರಿಂದ ನನಗೂ ಹೇಳಬೇಕೆನಿಸುತ್ತಿದೆ ಆದರೆ ಕೇಳುವವರ್ಯಾರು?  ಅಸಲು ಶಂಕರಪ್ಪ ನಂಗೆ ಅಂತ ಹೇಳ್ತಾ ಇದ್ದಾನ ಅದೇ ತಿಳಿದಿಲ್ಲ. ಹಾಗಾದರೆ ನಾನು ಯಾರಿಗೆ ಅಂತ ಹೇಳಲಿ, ಇನ್ನು ಮುಂದೆ ನನ್ನ ಪಾಡಿಗೆ ನನೂ ಹೇಳುತ್ತಿರುತ್ತೇನೆ ಅಷ್ಟೆ.

ಶಂಕರಪ್ಪ,
"ನಂಗೆ ಎಲ್ಲಾ ನೆನಪಾಗ್ತಾ ಇದೆ. ಅಯ್ಯೋ ಎಷ್ಟೆಲ್ಲಾ ಮಾಡಿದೆ ,ಮಗನ್ನ ಓದ್ಸಿದೆ, ಮಗಳಿಗೆ ಮದ್ವೆ ಮಾಡಿದೆ,ಒಳ್ಳೇ ಮನೆ ಕಟ್ಟಿದೆ, ಎಲ್ಲಾ ನೆನಪಾಗ್ತ ಇದೆ.
ನಂಗೆ ಬೆಕ್ಕು ಅಂದರೆ ಭಯ ಈಗ್ಲು ಭಯ ಯಾಕೆ? ಕನಸಲ್ಲಿ, ಕನ್ಸ ಅಂದ್ರೆ ?
ಆ ಕನ್ಸಲ್ಲಿ ನಾನು ಓಡ್ತಾ ಇದ್ದೆ. ನನ್ನಿಂದೆ ಬೆಕ್ಕು ಅಟ್ಟಿಸ್ಕೊಂಡು ಬರ್ತಾ ಇತ್ತು.
ಭಯ ಬಿದ್ದು ಓಡ್ತಾನೇ ಇದ್ದೆ. ಅಲ್ಲೊಂದು ದೊಡ್ಡ ಕಟ್ಟಡ ಇತ್ತು.
ಅಮ್ಮಾ ಹೇಳ್ತಾ ಇದ್ರು ಅಲ್ಲೀಗೆ ಹೋಗ್ಬೇಡ, ಶಿಡ್ಲು ಹೊಡ್ದಿರೋ ಕಟ್ಟಡ ಯಾವಾಗ್ಬೇಕಾದ್ರು ಬೀಳ್ಬೋದು ಅಂತ.
ಆದ್ರೆ ಏನ್ಮಾಡೋದು
ಹಿಂದ್ನಿಂದ ಬೆಕ್ಕು ಅಟ್ಟಿಸ್ಕೊಂಡು
ಬರ್ತಾ ಇತ್ತು,
ನಾನು ಆ ಶಿಡ್ಲು ಹೊಡ್ದಿರೋ ಮನೇಗೆ ಹೋದೆ.
ಅಲ್ಲೂ ಬಿಡ್ಲಿಲ್ಲ ನನ್ನನ್ನ ಬಂದು ಕಚ್ಚೇ ಬಿಡ್ತು.
ನಾನು ಜೋರಾಗಿ ಕಿರ್ಚುಕೊಂಡೆ.
ಕಿರ್ಚಿದ ಶಬ್ದಕ್ಕೇ ಇಡೀ ಕಟ್ಟಡ ಬಿತ್ತು.
ದೊಡ್ಡ ಶತಮಾನಗಳಷ್ಟು ಹಳೆಯ ಕಟ್ಟಡ,
ಮೊದಲ ಏಟಿಗೇನೆ ಬೆಕ್ಕು ಸತ್ತಿತು.
ನಂತರ ನಾನೂ ಸತ್ತೆ.
ಇದು ಕನ್ಸು.
ಅಂದ್ನಿಂದ ನಂಗೆ ಬೆಕ್ಕು ಅಂದ್ರೆ ಬಾರೀ ಭಯ ಹಾಗು ಕೋಪ ಒಂತರಾ ದ್ವೇಶ.

ಬೆಕ್ಕು, ನಾ ಸುಮ್ನೆ ಇದ್ನಾ?
ಇಲ್ಲಾ ಹಿಡ್ಕೊಂಡೆ.
ರಂಗಂಗೆ ಹೇಳಿ, ಅದೂ ಹೇಗಿತ್ತು, ನಾವು ಅದನ್ನ ಹೇಗೆ ಹಿಡಿದ್ವಿ
ತಣ್ಣಗಿರೊ ಹಾಲನ್ನ ಇಟ್ಟು,
ಸತ್ತ ಇಲಿ ಇಟ್ರೆ ಬರೋಲ್ಲ ಅಂತೇಳಿ ಮೊದ್ಲು ಬದ್ಕಿರೊ ಇಲೀನ,
ಅದ್ಕೆ ಚಕ್ಲಿ ಆಸೆ ತೋರ್ಸಿ ಬೋನಲ್ಲಿ ಹಿಡ್ದು,
ಅದ್ರ ಕಾಲ್ಗೆ ದಾರ ಕಟ್ಟಿ ಓಡಾಡೋಕೆ ಬಿಟ್ವಿ.
ಬೆಕ್ಕು ನೋಡ್ತು, ಸಿಕ್ತು ಅಂತ ಹಿಡ್ಕೊಂತು.
ನಾವು ಅಂದ್ಕೊಂಡಿದ್ವಿ ಅದು ತಿಂದುಬಿಡುತ್ತೆ ಅಂತ.
ಅದು ಆಟ ಆಡೋಕೆ ಶುರು ಮಾಡ್ತು
ಇದೆ ಸರ್ಯಾದ ಸಮ್ಯ ಅಂತೇಳಿ ತಂತಿ ಬಿಗಿದ್ವಿ ನೋಡಿ ಎಳೆದ್ವಿ ನೋಡಿ ಭಯಂಕರವಾಗಿ ಕಿರ್ಚುತ್ತಾ ಇತ್ತು.
ಹಾಗೇ ಅದನ್ನ ನೋಡ್ತಾ ಇದ್ದೆ.
ಕೈ ಕಾಲು ಒದ್ದಾಡ್ತಾ ಇತ್ತು.
ನಾನು ಜೋರಾಗಿ ನಗ್ತಾ ಇದ್ದೆ.
ಅದು ಉಸ್ರು ಇರೋ ವರ್ಗು ನನ್ನನ್ನೇ ನೋಡ್ತಾ ಇತ್ತು.
ಅದಕ್ಕೆ ಎಷ್ಟು ಕೊಬ್ಬಿರಬೇಡ ಅಂತ ಅನ್ನಿಸ್ತು.
ದೊಡ್ಡ ಕಲ್ಲು ತಗೊಂಡೆ,
ತಲೆ ಮೇಲೆ ಒಂದೇ ಏಟು,
ರಕ್ತ ಬಂದು ಹಣೆಗೆ ತಾಕಿತು.
ಕೊಂದಾಕಿದ್ದೆ . ಸಾಯಿಸಿಬಿಟ್ಟಿದ್ದೆ . ಬೆಕ್ಕನ್ನ ಸಾಯಿಸಿಬಿಟ್ಟಿದ್ದೆ .
ಇಷ್ಟು ಕ್ರೂರವಾಗಿ ಕೊಂದರೂನು ಬೆಕ್ಕಿನ ಭಯ ನಂಗೆ ಹೋಗ್ಲಿಲ್ಲ .
ಅದ್ಕೆ ಅಮ್ಮ ಹೇಳಿದ್ರು ಅಂತ ಮದ್ವೆ ಆದೆ.
ರಂಗಿ ರಂಗನಾಯಕಿ ಅಂತ ಹೆಸರು.
ಹಾಸ್ಗೆ ಮೇಲೆ ಪಕ್ಕಾ ಮಲಗ್ತಾ ಇದ್ಲು
ದಿನಾಲು.
ಅದ್ಕೆ ಯಾವತ್ತು ರಾತ್ರಿ ಬೆಕ್ಕು ಕನ್ಸಲ್ಲಿ ಬರ್ಲೇ ಇಲ್ಲ.
ಬೆಕ್ಕೀಗ್ ಭಯ ಬಿದ್ದು ಅವ್ಳನ್ನ ತಬ್ಕೋತಾಇದ್ದೆ.
ಮಕ್ಳಾಗ್ಬಿಟ್ರು.
ಆಮೇಲೆ ಬೆಕ್ಕು ನೆನ್ಪೇ  ಆಗ್ಲಿಲ್ಲ."

ನಾನು ಮೊಹನ ಮಾತಾಡ್ತ ಇದ್ದೀನಿ
"ಎದುರಿಗೆ ಕಾಣ್ತಾ ಇತ್ತು.
ಕಾಣ್ತಾ ಇದ್ದದ್ದನ್ನ ಇದಲ್ಲ ಇದಲ್ಲ
ಅಂತ
ಹುಡುಕಿಕೊಂಡು ಇಲ್ಲಿಗೆ ಬಂದದ್ದು.
ಒಳಗೇನೋ ಇದೆ ಅಂತ.
ಸುಮ್ಮನೆ ಇದ್ದನಾ ಇಲ್ಲ.
ಕೂತು ಗಂಟೆಗಳು ದಿನಗಳು
ಹೀಗೆ ಹಾಗೇ ಕೂತು ಪ್ರಯತ್ನಿಸಿ ಹೊಕ್ಕುತ್ತಾ ಹೋದದ್ದು,
ಕಡೆಗೆ ವಿಙ್ಞಾನಿ ಆದದ್ದು.
ಪಕ್ಕಾ ಸತ್ಯ ಸಂಗತಿಗಳು ಪಕ್ಕಾ ವಾಸ್ತವ ಖುಶಿಯಲ್ಲಿದ್ದೆ.
ನಿತ್ಯ ಸಂಜೆ ಬೇಸರ ಆದಾಗ ಸಮುದ್ರ ತೀರಕ್ಕೆ ಹೋಗಿ ಕೂರುತ್ತಿದ್ದೆ.
ಪ್ರತೀ ಎದುರಿಗೆ ಕಂಡದಕ್ಕೂ ಪ್ರಶ್ನೆ,
ಸಂಜೆಗಳು ಕಳೆದು ಕತ್ತಲಾಗಿ ರಾತ್ರಿಯಾಗುವ ಪ್ರತೀ ಕ್ಷಣಕ್ಕೂ ಸಾಕ್ಷಿಯಾದೆ.
ಆದ್ದರಿಂದ ರಾತ್ರಿ ಆದದ್ದು ತಿಳಿಯಿತು.
ನಕ್ಷತ್ರಗಳು ನೋಡಿದೆ ನಗಲಿಕ್ಕಾಗಲಿಲ್ಲ.
ಪ್ರತೀ ನಕ್ಷತ್ರದ ಹೆಸರೂ ಗೊತ್ತಿತ್ತು.
ಅದರ ಪ್ರತೀ ಚಲನೆಯನ್ನೂ ಲೆಕ್ಕಚಾರ ಹಾಕಬಲ್ಲವನಾಗಿದ್ದೆ.
ನಾನು ಎದ್ದು ನಡೆದೆ.
ಹೆಚ್ಚು ಹೊತ್ತು ಅಲ್ಲಿ ಇರಲಾಗಲೇ ಇಲ್ಲ"

ಶಂಕರಪ್ಪ
"ಜನ ಇದನ್ನ ಮೆಜೆಸ್ಟಿಕ್ ಅಂತ ಕರೀತಾರಂತೆ. ನಾನು ಈಗ ಇದರ ಒಳಗೇ ಇದ್ದೀನಿ.
ಓ ಮೆಜೆಸ್ಟಿಕ್ ಮನುಷ್ಯ ಜೀವಿತದ ಸ್ವಪ್ನ ಸುಂದರಿಯೆ,
ಹಗಲು ಮುದುಕಿಯೇ ರಾತ್ರಿಯ ಅಪ್ಸರೆ ಸುಂದರಿಯೆ,
ನಡೆದಾಡುವ ರಸ್ತೆಗಳೆ ಓಡಿಹೋಗುವ ಕಟ್ಟಡಗಳೇ ನಿಂತೇ ಇರುವ ಬಸ್ಸುಗಳೆ
ನಾನು ನಿಮ್ಮನ್ನೆಲ್ಲಾ ನೋಡುತ್ತಿದ್ದೇನೆ ಬಹುಪರಾಕ್.
ಓ ಮಜೆಸ್ಟಿಕ್, ಮನುಷ್ಯ ಜೀವಿತವನ್ನು ಹುದುಗಿಸಿಟ್ಟುಕೊಂಡುಬಿಟ್ಟಿದ್ದೀಯೆ.
ಪ್ರತಿಮೆಗಳು ಸೋತಿಲ್ಲ.
ತೇಟ್ ಮೊಲದಂತೆಯೇ ಇರೋ ಪ್ರತಿಮೇನ ಕಸದ ಬುಟ್ಟಿಮಾಡಿ ಆಕರ್ಷಿಸುತ್ತಿದ್ದಾರೆ.
ನಿನ್ನ ನನ್ನಾ ಅಲ್ಲ ಕಸವನ್ನ.
ಹಾಗೆ ಮೋಟು ಬೀಡಿ ಸುಡ್ತ ಸುಡ್ತ ಸುಟ್ಟುಬಿಡಬೇಕು ಪ್ರತಿಮೆಗಳನ್ನ.
ಇಲ್ಲಾಂದ್ರೆ ನಿಜ್ವಾದ ಮೊಲಾನ ಕೊಂದು ಹಾಕ್ತಾರೆ.
ನಿನ್ನಲ್ಲಿಗೆ ಬೆಳಗಿನಿಂದ ಸಂಜೆಯವರೆಗೂ,
ಛೆ ನಿಂಗೆ ಬೆಳ್ಗು ಇಲ್ಲ ಸಂಜೇನೂ ಇಲ್ಲ. ಎಂದಾದ್ರು ಒಂದು ಕ್ಷಣ ಕಣ್ಮುಚ್ಚಿದ್ದೀಯ?
ನಿನಗೆಲ್ಲಿಯದು ಪುರುಸೊತ್ತು ಮುದ್ದಾದ ಗುಂಡುಮುಖದ ಹುಡುಗಿಯರು, ಅವರನ್ನ ಇವರೋ, ಇವರನ್ನ ಅವರೋ ನೋಡುತ್ತಾ ನಡೆಯುವ ನಿತ್ಯ ನೈಮಿಕ ಕ್ರಿಯೆ.
ಅಲ್ಲಿ ನೋಡು ಸೆರೆಗೊದ್ದಿಸಿಕೊಂಡು ಹಾಲು ನೀಡುತ್ತಿದ್ದಾಳೆ.
ಯಾವ ಪಡಪೋಶಿ ನಡೆದರೂ ದಿಕ್ಕು ಕೇಳುವವರಿಲ್ಲ ಇಲ್ಲಿ.
ಯಾವ ಬಸ್ಸು ಎಲ್ಲಿಗೆ ಹೋಗಬೇಕು ಅಷ್ಟೆ ಇಲ್ಲಿ.

ಶಂಕರಪ್ಪ ಆಕಾಶ ನೋಡ್ತ ಇದ್ದಾನೆ, ಮತ್ತೆ ಅಲ್ಲಿರೊ ಮರ, ಆಮೇಲೆ ಹಾಗೆ ನೋಡ್ತಾ ಇದ್ದಾನೆ. ಅವ ನೋಡ್ತಾ ಇದ್ದಾನೆ ಅಂತೇಳಿ ನಾನೂ ನೋಡೊಕೆ ಶುರು ಮಾಡಿದೀನಿ. ಇದೆ ಆಕಾಶ ನೋಡ್ತಾ ಇದ್ದೀನಿ. ನೆಲ ಕುಸಿತಾ ಇದೆ. ಏನೇನೋ ಭಾವಗಳು ಕಾಡ್ತಾ ಇದೆ. ನಾನು ತೇಲ್ತ ಇದ್ದೀನಿ. ಅಯ್ಯೋ ನಂಗೇ ತಿಳೀದೆ ಇರೋ ರೀತಿ ನಾನು ತೇಲ್ತ ಇದ್ದೀನಿ. ಈ ಊರು, ಈ ತಾಲೂಕು, ಈ ರಾಜ್ಯ, ಕಡೆಗೆ ಈಗೆ ದೇಶ ಎಲ್ಲಾನು ದಾಟಿ ವ್ಯಾಪಿಸ್ತಾ ಇದೆ. ನಾನೇ ವ್ಯಾಪಿಸ್ತ ಇದ್ದೀನಿ. ನೊಡ್ತ ನೋಡ್ತಾನೆ ಬೆಳೀತಿದೀನಿ. ಇಲ್ಲಿ ಎಲ್ಲವೂ ಚಲಿಸ್ತಾ ಇದೆ, ಹೊರಗೆ ಸ್ತಬ್ದವಾದಂತೆ ಕಂಡವುಗಳು ಇಲ್ಲಿ ಚಲಿಸ್ತಾ ಇದೆ. ಶಂಕರಪ್ಪ ಆಕಾಶ ನೋಡ್ತಾನೇ ಇದಾನೆ.

ಶಂಕರಪ್ಪ
"ಏನೂ ನೆನಪಾಗ್ತಾ ಇಲ್ಲ ನಾನು ಇಲ್ಲಿ ಇದ್ದೀನಿ. ಆದರೆ ಅವಳು ನೆನಪಾಗ್ತಾ ಇದ್ದಾಳೆ.
ಎಪ್ಪತ್ತು ವರ್ಷ ನಂಗೀಗ.
ಆದ್ರು ಅವಳನ್ನ ಮರ್ಯೊಕೆ ಆಗಿಲ್ಲ.
ಅವ್ಳ ಜೊತೆ ಎಂದೂ ಮಾತಾಡಲೇ ಇಲ್ಲ"

ನಾನು ಮೋಹನ ಮಾತನಾಡುತ್ತಿದ್ದೀನಿ
"ಮನುಷ್ಯ ಪ್ರೀತಿ. ಅಥವ ಅದೆನ್ನೆಲ್ಲವನ್ನ ಮೀರಿದ ಪ್ರೀತಿ.
ನೀನು ಕಂಡದ್ದನ್ನ ನಾನು ಕಾಣುತ್ತೀನ..?
ಅವಳು ಹೌದು ಅವಳು ಇದೆ ಮೆಜೆಸ್ಟಿಕ್,
ಅವತ್ತು ಇಲ್ಲಿ ನಿಂತಿದ್ದದು  ಒಂದು ಪ್ರಾಣಿ,
ಹೆಗ್ಣಾನೋ ಇಲೀನೋ ತಿಳ್ಯದ ಪ್ರಾಣಿ ಒಂದು ನನ್ನನ್ನೇ ತಿಂದು ಹಾಕೋ ರೀತಿ ನೋಡ್ತ ಇತ್ತು.
ಅವತ್ತು ನಂಗೆ ಬೇರೆ ಕೆಲ್ಸಾ ಇರ್ಲಿಲ್ವೋ ಅತ್ವಾ
ಇದನ್ನ ನೋಡೋ ಬಯ್ಕೆ ಆಯ್ತೋ
ಒಟ್ನಲ್ಲಿ ಮೊದಮೊದಲಿಗೆ ಸುಮ್ಮನೆ ನೋಡ್ತಾ ಇದ್ದೋನು
ಅದರ ಕಣ್ಣುಗಳ
ಜೊತೆಗೆ ಸಂಬಾಷಣೆಗೆ ನಿಂತು
ಅದ್ರ ಪ್ರತಿ ಚಲ್ನೇಗೂ ಸೇರಿ
ಅದರೊಳಗಿನ
ಆಲೋಚನೆಯ ಸ್ಥಾನಕ್ಕೆ
ಪ್ರಙ್ಞೆ ಅನುರಣನೆಗೊಂಡು
ಒಂದಕ್ಕೊಂದು ಚಲಿಸಲು ಆರಂಭ ಆದಾಗ
ಕಣ್ಣು ದೇಹ ನಂತರ ಬುದ್ದಿ ಕಡೆಗೆ ನನ್ನ ಮನ್ಸೂ
ಎಲ್ಲಾನೂ ಸೇರಿ
ಆ ಪ್ರಾಣಿ
ಆ ಕ್ಷಣದ
ಜೊತ್ಗೆ
ಮೀಟೋಕೆ
ಶುರು
ಆದಮೇಲೆ
ಒಮ್ಮೆಲೇ
ನನ್ನನ್ನ
ತಬ್ಬಿಕೊಂಡು
ಅವಳು
ಹೋದಾಗ
ನಾನು
ಅವಳನ್ನ
ಕಂಡೆ.
ಆಗಲಿಂದ ನಾನು ಅವಳನ್ನ ಹುಡುಕುತ್ತಲೇ ಇದೀನಿ"

"ಶಂಕರಪ್ಪೊರೆ ನಿಲ್ಲಿ"
ನಾನೂ ಬರ್ತಾ ಇದ್ದೀನಿ......
ನಾ ಬರ್ತಿದ್ದಿನಿ....
ಸರಿ, ನಾ ಹೋಗ್ತಾ ಇದ್ದಿನಿ........

.......


ಕಡೆಗೆ,
       ಬುದ್ದ ಕೂತಿದ್ದ ಎದುರಿಗೆ
       ನಾನು ನೋಡುತ್ತಿದ್ದೆ.
ಹಿಂದಿನಿಂದ ಕಪ್ಪು ಆನೆಯೊಂದು ಮುಂದೆಬರುತ್ತಾ ಗಿಳಿಟ್ಟಿತು.
ಆಗ
ಅಲ್ಲಿ
ಬುದ್ದ
ಇದ್ದಾನೋ ಇಲ್ಲವೋ
ಎಂಬ ಗೊಡವೆಗೇ ಹೊಗದೆ ಮುಂದೆಸಾಗಿತು.
ಅದಕ್ಕೇ ನಾನೆನುತ್ತೇನೆ
ಆನೆ ನಡದದ್ದೇ ದಾರಿ ಅಂತ............

.......


ಹೊಸ ವರ್ಷದ ಶುಭಾಶಯಗಳು.
ಬಯಲಿಗೆ ಬಯಲೇ ಪ್ರತಿರೂಪ
ಆಲಯಕ್ಕೆ ಆಲಯವೆ.
ಬಯಲು ಆಲಯದ ಪ್ರಶ್ನೆ ನಿತ್ಯ
ಇದೇ ಉತ್ತರ.......

.......


ಅವಳ ಮದುವೆಯ ಆಮಂತ್ರಣ ಕರೆ
ಗಾಗಿ
ಬದುಕ ಭೂಮಿಕೆಯಾಗಿಸಿ ನಡೆವ ನೃತ್ಯಕ್ಕೆ
ತಾಳವನ್ನ, ಸಂಗೀತವನ್ನೊದಗಿಸಲು
ಹೊರಡುತ್ತಿದ್ದೇನೆ......

.......


ಯಾವಕಾಲದ್ದೊ,ಶಿಥಿಲಗೊಂಡ ದೇವಾಲಯದಲ್ಲಿ
ಕೂತ
ಒಂದು ಹೆಣ್ಣು.
ಪಕ್ಕದಲ್ಲಿ ಹೊಸದಾಗಿ ಕಟ್ಟುತ್ತಿರುವ ದೇವಾಲಯ
ಮುಂದೆ ಕೆರೆತುಂಬಿ ಕೋಡಿ ಬಿದ್ದು
ಹರಿಯುತ್ತಿರುವ ನದಿ.
ಚಿತ್ರಿಸಬೇಕು ಎಲ್ಲವನ್ನಾ, ಅವಳನ್ನಾ ಸೇರಿಸಿ
ನಿನಗೆ ತೊರಲಿಕ್ಕೆ.......

.......


ಜೊತೆಗಿರಲಿಕ್ಕಾಗುವುದಿಲ್ಲವೆಂದು ಇಬ್ಬರಿಗೂ
ತಿಳಿದಿತ್ತು.
ಆದ್ದರಿಂದಲೆ ಇರಬೇಕು,
ಜೊತೆಗಿರಲಾರದೆ ಹೊದೆವು.
ಆದರೆ ಪ್ರೀತಿ
ಬದುಕು ಪ್ರೀತಿಯೊಳೊಗೋ, ಪ್ರೀತಿ ಬದುಕಿನೋಳೊಗೋ
ಎಂದೆಣಿಸುತ್ತಲೆ ಇಬ್ಬರೂ ದೂರ ಹೊರಟು ಹೋದೆವು......

.......


ಪದಕ್ಕೆ ಏಕೋ ಸೋಲು
ಪದ
ನಂತರ ಅಕ್ಷರ......
ಕಥೆ ಹೇಳ್ತೇನೆ ಕೇಳು ಇಂದು ನಡೆದದ್ದು,
ನಾನು ಇಷ್ಟಪಟ್ಟ ಇಬ್ಬರೂ ಹುಡುಗಿಯರೂ
ಇಂದು ಮಾತಾಡಿದರು.
ರಾತ್ರಿ ಊಟಕ್ಕೆ ಹೊರ ಹೋಗಬೇಕಾಯಿತು.
ಒಂಟಿ ಕೂತಿದ್ದೆ ಯಾರೋ ಬಂದ
ಜೊತೆ ಸಿಕ್ಕ ಹಾಗಾಯಿತು, ಅಂದುಕೊಂಡೆ.
ಆದ್ದರಿಂದ
ಮಾತಿಗಿಳಿದೆ.
ಮಾತನಾಡಿದರೆ ಮುಗಿಯಿತು.
ಈಗ ನೋಡು ಕತೆ ಮುಗಿಯಿತು ಎಂದು ಕೊಂಡಾಗ
ದೃಷ್ಠಿಗಳೂ, ಸ್ವರಗಳೂ, ಎಲ್ಲಕ್ಕಿಂತ ಹೆಚ್ಚಾಗಿ
ಏನೋ ತಪ್ಪಿದೆ ಎಂದೆನಿಸುತ್ತೆ.
ಯಾಕೆಂದರೆ,
ಸಂಶೋದಿಸಹೊರಟಾಗ, ಬದುಕು ಬದುಕಲಿಕ್ಕೆ
ಅಷ್ತೇನ?
ಅಂತ ಅನ್ನಿಸುತ್ತೆ.
ಅಷ್ಟೇ ಅಲ್ಲ ಅಂತ ಅದೇ
ಕ್ಷಣ
ಅನ್ನಿಸಿಬಿಡುತ್ತೆ.
ಈ ರೀತಿ ಅರ್ಥ ಆಗದೇನೇ ಹೋದಾಗ
ಯಾವುದಕ್ಕು ಅರ್ಥವೇ ಇಲ್ಲ ಎಂದೆನಿಸಿ
ಅರ್ಥ ಎಂದರೇನೆ ಅರ್ಥ ಸಂಧಿಗ್ಧತೆ ಎಂದು
ನಂಬಿ ಬಿಟ್ಟಿದ್ದೀನಿ........

.......


ಅಲಂಕಾರಕ್ಕೆ ಬಟ್ಟೆ ಕೊಳ್ಲಲು ಹೋದದ್ದು.
ಬಟ್ಟೆ ಸಿದ್ದವಾಗಿಲ್ಲವೆಂದೂ, ಸಮಯವಿದೆಯೆಂದೂ
ದೇಗುಲಕ್ಕೆ ಹೊರಟದ್ದು.
ನಾಲ್ಕು ದಾರಿ ಸೇರುವ ಸ್ಥಳದಲ್ಲಿ ದೇಗುಲ
ದರ್ಶನದ ನಂತರ
ಬಂದ ಹಾದಿ ಮರೆತಿತ್ತು
ಅಪರಿಚಿತನೊಬ್ಬ ಹೇಳಿದ
ಇದೇ ದಿಕ್ಕು ಸೇರಬಲ್ಲಿರಿ ಸೇರಬಲ್ಲಿಗೆ.
ಹಾದಿಗುಂಟಾ ಒಂದೇ ಆಲೋಚನೆ
ದೇಗುಲ ಆರಂಭ ಸ್ಥಾನವೋ ಅಥವಾ....?
ನಾಲ್ಕೂ ಹಾದಿಗಳು ಒಂದೇ ಸ್ಥಳಕ್ಕೆ ಕೊಂಡೆಯುತ್ತದಾ...?
ಸಾದ್ಯವಿಲ್ಲ... ಸಾದ್ಯವಾದರೆ...?
ದೇಗುಲ ಹಾಗೂ ನಮ್ಮ ಮನೆ...?
ಪಕ್ಕದ ಮನೆಯವ ಮನೆಬಿಟ್ಟು ಓಡಿಹೋಗಿದ್ದ......

.......


ನಾಳಿನ ಬಗ್ಗೆ ಚಿಂತಿಸುವುದನ್ನು ಬಿಟ್ಟು ಬಿಟ್ಟಿದ್ದೇನೆ.
ಆದ್ದರಿಂದ,
ನಾಳಿನ ಮಸಾಲೆ ದೋಸೆಯಲ್ಲಿನ ಮಸಾಲೆಯ ಬಗ್ಗೆ ಚಿಂತೆಗೀಡಾಗಿದ್ದೇನೆ.......

.......


ಸಾಗರದ ವಿಶಾಲತೆ ಸಾಕೆನಿಸಿತೇನೋ..? ಯಾಕೆ..?
ಕಾಡು ಇಷ್ಟವಾಯಿತೆ...?
ಕೊರಕಲು ಜಾಡು, ಬೆಳೆದ ಮರಗಳ ಹಸಿರು
ಜರಿಯಾಗಿ ತೊರೆಯಾಗಿ ನದಿಯಾಗುವ ನೀರ ಜಾಡು
ಆ ಸಾಗರದ ಅನಂತ ಸಾದ್ಯತೆಗಳ ಮದ್ಯೆ ವಿಶಿಷ್ಠವಾಯಿತೆ....??

.......


ಪ್ರಾಣದ ಪ್ರತಿಷ್ಠಾಪನೆಗೆ ಕಲ್ಲೊ...?
ಕಲ್ಲಿನೊಳಗೆ ಪ್ರಾಣವೋ...?
ರಸ್ತೆ ಬದಿಯಲ್ಲಿ ಈ ಅರ್ಧ ರಾತ್ರಿಯಲ್ಲಿ ಸೊಳ್ಳೆಗಳಿಂದ ಕಡಿಸಿಕೊಳ್ಳುತ್ತಾ,
ಬಸ್ಸಿಗಾಗಿ ಕಾಯತ್ತಾ, ಉಚ್ಚೆ ಹೊಯ್ಯಲಿಕ್ಕೆ ಜಾಗ ಹುಡುಕುತ್ತಾ
ಈ ಆಲೋಚನೆ ಹೊಳೆದದ್ದು
ಸರಿಯೋ ತಪ್ಪೋ ಎಂಬಲ್ಲಿ ದ್ವಂದ್ವದ ಆರಂಭ......

.......


ಅನುಭವಕ್ಕೆ ಪಡೆದೇನೆಂಬ ಅಹಂ.
ಪಡೆದದ್ದೇನು
ಪುಟಗೋಸಿ
ಕೂಡ
ಕಿತ್ತೆಸೆಯಲು ಆಗದಿದ್ದ ಮೇಲೆ......

.......


ಬಿಟ್ಟು ಬಿಡುವ ತವಕಕ್ಕೆ ಬಿಡಲೊಲ್ಲದ ಸೆಳೆತ.
ಮಧ್ಯೆ
ಅಕ್ಕ, ಅಣ್ಣ, ತಂಗಿ, ತಮ್ಮ ಹುಟ್ಟಲೇ ಇಲ್ಲ.
ಅವಳಿಗೆ ಅಸಹ್ಯ, ಅವನು ನಂಬಲೇ ಇಲ್ಲ,
ಒಂಟಿತನ ಚಟ ಅಲ್ಲ, ಹವ್ಯಾಸವೂ ಅಲ್ಲ......
ಆದರೆ
ಏಕಾಂತ, ಮೌನದ ಸುಶ್ರಾವ್ಯ ಜೀವಂತ ಗಾನ ಸಮ್ಮೋಹನ......

.......


ಬಿಟ್ಟು ಕೊಡುವುದೆಂದರೆ...?
ಗಳಿಸುವ ತವಕ.
ಆದ್ದರಿಂದ
ಬಿಟ್ಟು ಕೊಡಲಿಕ್ಕಾಗಿ ಅಲ್ಲ.
ಹಾಗಂತ
ಗಳಿಸಲಿಕ್ಕಾಗೂ ಅಲ್ಲ.
ಹರಿಯುವುದಕ್ಕೆ,
ಸುಮ್ಮನೆ
ಮೂಗು ಮುಚ್ಚಿ ತೇಲುತ್ತಾ ಸಾಗಲಿಕ್ಕೆ........

.......


ಏಕಾಂಗಿಯಾಗಬೇಕೆಂದು ತೀವ್ರವಾಗಿ ಹಂಬಲಿಸಿದೆ
ಕಾಲಕ್ಕೆ ಕೇಳಲಿಲ್ಲ
ಹುಟ್ಟಿದೆ,
ಗುಂಪಿನಲ್ಲಿ ಬೆಳೆದೆ
ಜೊತೆಯಾಗಿ ಎಲ್ಲಾಕಡೆಯೂ ಸಾಗಿ,
ಯಾರೆಲ್ಲ ನನ್ನ ಜೊತೆಗಿದ್ದರೋ ಅವರೇ ನನ್ನನ್ನ ಅಸಹ್ಯಿಸಿಕೊಳ್ಳುವವರೆಗೂ
ಸಾಗಿದಾಗ
ತಿಳಿಯದಂತೆ ಏಕಾಂಗಿಯಾಗಿಬಿಟ್ಟಿದ್ದೆ......

.......


ಅವಳು, ಅವನು,
ಪೂರಾ ತರಗತಿ
ಚಾಕಪೀಸು,ಬೋರ್ಡು
ಕೂತ ಛೇರು
ಈ ಸ್ಥಿತಿಗೆ ಏನೆಂದು ಹೇಳಲಿ....?

.......


ಶುಭೋದಯ. ರಥಸಪ್ತಮಿಯ ಶುಭಾಷಯಗಳು
ಅರ್ಥೈಸಲು ಧ್ವನಿಗಳಿವೆ.
ಧ್ವನಿಸಲು ಮಾರ್ಗಗಳಿವೆ.
ಎಲ್ಲವ ಮೀರಲು  ನೀನಿದ್ದೀ.
ಸಹಜದಲ್ಲಿ ಏನೂ ಇಲ್ಲ
ಅದೇ ರೀತಿ
ಅಸಹಜದಲ್ಲಿ ಕೂಡ......

.......


ನಡೆದ ದಾರಿಯಲ್ಲೆಲ್ಲ ಹೆಜ್ಜೆ ಗುರುತು
ಶಾಶ್ವತವಾದರೆ......?
ಭೂಮಿ ಸಮನಾಗಿರೊದಿಲ್ಲ.
ಹಾಗಾದರೆ ಅಲ್ಲಿ ಆಂಜನೇಯನ
ಹೆಜ್ಜೆ ಮೂಡಿದೆ.
ಅದು ಮನುಷ್ಯನದಲ್ಲ
ಹೋ ಹಾಗೋ.....

.......

ಪರಮಹಂಸ, ಬೆಕ್ಕು
ನಾನಲ್ಲ ನೀನಲ್ಲ ಎಲ್ಲಾ
ಎಲ್ಲಾ
ಅಂದಾಗ ಅದೈತ ಎಂದೆ.
ನಾನೆ ನೀನು, ನೀನೆ ನಾನು
ಅಷ್ಟು ಪ್ರೀತಿ
ಎಂದಾಗಲು ಅದೈತ ಎಂದೆ.......

.......


ಸರ್ಕಾರಿ ಅಂಗೀಕೃತ, ಕಾನೂನು ಬದ್ಧವಾದ,
"ಮನಸು ಮಾರಾಟ ಮಳಿಗೆ"
ದೊಡ್ಡ ಬೆಟ್ಟದ ತುದಿಯಲ್ಲಿನ
ಒಂಟಿ ಬೇರಿನ
ಒಂಟಿ ಮರದ
ಎಲೆಯ ತುದಿಯಲ್ಲಿ ಮೂಡಿದ ಮುತ್ತಿನಂತಹ ಹನಿಯಲ್ಲಿ
ನಿನ್ನ ಮುಖ ನೋಡಬೇಕೆನಿಸಿದೆ.....

.......


ಉತ್ತರ,
ಕ್ರಿಯೆ ಕರ್ಮ ಆನಂದಕ್ಕೆ.
ಕಮಲದೆಲೆಯ ಮೇಲೆ ಒಂಟಿ ಕಾಲಲ್ಲಿ ನಿಂತು
ಶಿಕ್ಷೆಯಲ್ಲ, ಕರ್ಮ ಗಿರ್ಮ ಏನು ಅಲ್ಲ
ಒಳಹೊಕ್ಕುವ ತವಕ
ಆನಂದಕ್ಕೆ ಪ್ರತೀಕ
ಅಷ್ಟೆ.
ಮನಸ್ಸು ಶಾಂತಿಃ
ಶಾಂತಿಃ ಶಾಂತಿಃ ಶಾಂತಿಃ......

.......


ಇಂದು ಅವಳಿಗೆ
ಅಂಚೆಯ
ಮೂಲಕ ಪತ್ರ ಕಳುಹಿಸಿದೆ.
ಆಗಸ ಎಂಬೋದು ಬಟಾಬಯಲು
ಬಯಲಿಗೆ ಬೆತ್ತಲೆಯ ಭಯವಿಲ್ಲ
ಅದು ಬಯಲು, ಅಷ್ಟೆ......

.......


ಸೆಳೆತದ, ನಾಜೂಕಿನ, ತಿಳಿನಗೆಯ, ವಯ್ಯಾರದ
ಕೊರೆವ ತಂತಿಯ ಅಹ್ವಾನಕ್ಕೆ ಬೆದರಿ
ಕಂಗಾಲಾದೆ.
ಕಡೆಗೆ ಪಾರಾದೆ.
ನಿಜದಲ್ಲಿ ನಾ ಒಂಟಿಯಾದಾಗ
ಎಲ್ಲರೂ
ನನ್ನವರೆ.......

.......


ಮೌನದ ನಿರಂತರ ಏಕಾಂತ ಧ್ಯಾನ

ಅರಿವಿನಲ್ಲಿ
ಅದೇನೋ
ಸೃಷ್ಠಿಗಾಗಿ ಸೃಷ್ಠಿಯ ಆಟಕ್ಕೆ
ಪಗಡೆಯೋ, ಕಾಯೋ ಅಥವಾ ಮೈದಾನವೋ
ಅರಿಯದಾದೆ.......

.......


ನೀನು ಜಾತ್ರೆಯಲ್ಲಿ
ಪೀಪಿ, ಬಲೂನು, ಬುರುಗು, ಬೂಂದಿ, ಬತ್ತಾಸು
ಕೊಂಡೆ.
ನಾನು ಹೋಗಿ
ಸರಸ್ವತೀ ನದಿಯಿಂದ ಪುಟಿದೆದ್ದು ಹರಿವ
ಅಮೃತ  ಜಲದಿಂದ
ಪರಮೇಶ್ವರನಿಗೆರಗಿದೆ.....

.......


ಎದುರಿಗೆ ಕೂತು ಕಣ್ಣೀರಿಡುತ್ತಿದ್ದೀಯ,
ನೋಡಿದೆ.
ಏನೂಮಾಡಲಾಗದ ಅಸಮರ್ಥ ನಿರ್ಜೀವಿಯಾಗಿಬಿಟ್ಟೆ.
ವ್ಯಾಖ್ಯಾನಕ್ಕೆ ನಿಲುಕದ ನಿರಂತರ ಶೋಧದ ನಿರರ್ಥಕತೆಗೆ
ನಾನೆ ಮಾದರಿಯಾಗಿಬಿಟ್ಟೆ.
ನಾನು ಕೂಡ ಅಳುತ್ತಿದ್ದೇನೆ ಅಷ್ಟೆ.....

.......


ನೀಲಿ ಆಕಾಶದಲ್ಲಿ ನಿನ್ನ
ಹೆಜ್ಜೆ
ಗುರುತುಗಳನ್ನು ಹುಡುಕಿದೆ,
ಒಂದು ಕತ್ತಲ ರಾತ್ರಿಯಲ್ಲಿ
ಭಯವಾಯಿತು.
ಏನೂ ಕಾಣಲಿಲ್ಲ,
ಬೊಗೊಸೆಯೊಡ್ಡಿ ಆಕಾಶಕ್ಕೆ ಮುಖಮಾಡಿ
ಮೊಣಕಾಲೂರಿ ಕೂತೆ.......

.......


ಎಷ್ಟೆಲ್ಲಾ ಹೇಳಬೇಕೆಂದು
ನಿನ್ನ ಬಳಿ ಬಂದೆ,
ಏನೇನನ್ನೋ ಕೇಳಬೇಕೆಂದು ಬಂದೆ,
ನಿನ್ನ ಕಂಡೆ
ಕಣ್ಣಲ್ಲಿ ನೀರು ಸುರಿಯುತ್ತಿತ್ತು.
ನಾನು ಅಳುತ್ತಿದ್ದೆ....

.......


ಸಾವಿರ ಬಿಂಬವ ಕಾಣಲಿಕ್ಕೆ ಸಾವಿರ ಕನ್ನಡಿ
ಬೇಕಿಲ್ಲ.
ಎರಡು ಕನ್ನಡಿ
ಎದುರಾ ಎದುರು
ಸಾಕು.
ನನ್ನ ಎದುರಿಗೆ ನೀನು
ನಿನ್ನ ಎದುರಿಗೆ ನಾನು.

.......


ಮೃಣನ್ಮಯಿ,
ಯಾರವಳು, ಏನಂತ ಹೇಳಲಿ
ಪ್ರೇಯಸಿ, ಆತ್ಮಸಖಿ......
ಅಕ್ಷರಗಳು ಸತ್ತಿವೆ.
ಅವಳಿಗೆ ಶಬ್ಧ ಕೇಳುವುದಿಲ್ಲ , ಮಾತನಾಡಲಿಕ್ಕಾಗುವುದಿಲ್ಲ.
ನಾನು, ಅವಳು
ಇಬ್ಬರೂ
ಗಂಟೆ, ದಿನಗಳು, ಒಟ್ಟಿಗೆ ಕೂತಿರುತ್ತಿದ್ದೆವು.
ನಾ
ಎದ್ದು ಹೋಗುವಾಗ
ಅವಳಿಗೆ ಒಂದು ಕಾಗದದಲ್ಲಿ ಬರೆದಿಟ್ಟುಕೊಟ್ಟ
ಕೆಲವು ಸಾಲುಗಳು ಈ ಕೆಳಗಿನವುಗಳು.
ಒಂದಕ್ಕೂ ಮತ್ತೊಂದಕ್ಕೂ ಸಂಬಂದವಿದೆಯೇ,
ಎಂದರೆ
ಗೊತ್ತಿಲ್ಲಾ ಎನ್ನಬಲ್ಲೆ,
ಇರುವ ಸಂಬಂದವೆಂದರೆ
ಅದು ಅವಳು,
ಮೃಣನ್ಮಯಿ
ಆದ್ದರಿಂದ,
ಇವುಗಳು ಮೃಣನ್ಮಯಿಗೆ...

ಜೀವ ಗೀತ


[ಹುಟ್ಟು, ಪ್ರೀತಿ, ಅಮ್ಮ, ಸಂದೇಹ, ಸಾವು. ಇವು ನನಗೆ ಏನೂ ತಿಳಿಯದ ಕೆಲವು ಸಂಗತಿಗಳು.ಮನುಷ್ಯನಿಂದ ತಿಳಿಯಬಹುದ?, ಪ್ರಯತ್ನಿಸಿದೆ. ದಕ್ಕಿದ್ದನ್ನ ಇಲ್ಲಿ ಮನುಷ್ಯ ಅನ್ನೋ ಭಾಗದಲ್ಲಿ ಬರೆದಿದ್ದೇನೆ. ಅಲ್ಲಿ ದಕ್ಕದ್ದನ್ನ ಕೈಯಲ್ಲಿ ಮಣ್ಣನ್ನ ಹಿಡಿದು ಸುಮ್ಮನೆ ಕೂತಾಗ ಮಣ್ಣಲ್ಲಿ ಕೆಲವು ಸಂಗತಿಗಳು ಕಂಡಿವೆ. ಅವನ್ನ ಮಣ್ಣು ಎಂಬೋ ಭಾಗದಲ್ಲಿ ಬರೆದಿದ್ದೇನೆ. ಕಡೆಗೆ ಮಾತು ಎಂಬ ಭಾಗದಲ್ಲಿ ಎರಡನ್ನೂ ಬೆರೆಸುವ ಪ್ರಯತ್ನ ಮಾಡಿದ್ದೇನೆ,,,
ಆದರೂ,
ಮಣ್ಣಿನಲ್ಲಿ ನನಗೊಂದು ಜೀವ ಭಾವ ಕಂಡಿತು, ನಾನು ಅತ್ತು ಬಿಟ್ಟೆ, ಏನೂ ಮಾಡಲಿಕ್ಕಾಗಲಿಲ್ಲ
ಇಲ್ಲಿ ನಾನಿದ್ದೇನೆ ನನ್ನ ಜೊತೆಗೆ ಮನುಷ್ಯನಿದ್ದಾನೆ.
ಇಲ್ಲಿ ನಾನಿದ್ದೇನೆ ನನ್ನ ಜೊತೆಗೆ ಮಣ್ಣಿದೆ.
ನನಗೆ ಮಣ್ಣು ಕಂಡ ರೀತಿ, ಮಣ್ಣಿಗೆ ನಾ ಕಂಡ ರೀತಿಯೇ
ಅಥವ
ನನಗೆ ಮನುಷ್ಯ ಕಂಡ ರೀತಿ, ಮನುಷ್ಯನಿಗೆ ನಾ ಕಂಡ ರೀತಿಯೇ
ಇಲ್ಲಿನ ರಚನೆ]

                                                  ೧.ಹುಟ್ಟು

ಮನುಷ್ಯ

                                             ಒಂದು ಗಂಡು
                                             ಒಂದು ಹೆಣ್ಣು 
                                             ಒಂದಾದಾಗ
                                             ಒಂದು ಮಗು
                                             ಹುಟ್ಟಿತು
                                             ಹುಟ್ಟು ಎಂದರು

ಮಣ್ಣು

                                             ಮಣ್ಗೆಂತ ಗಂಡು,
                                             ಮಣ್ಗೆಂತ ಹೆಣ್ಣು,
                                             ಮಣ್ಣುಟ್ತು
                                             ಹುಟ್ಟು ಅಂದ್ರು.

ಮಾತು   
                                                            ಪ್ರತೀ ಪಾತ್ರ
                                             ಸಮ್ಮಿಲನದಲ್ಲಿ ಉದ್ಗಮಗೊಂಡದ್ದು
                                             ಪ್ರಸ್ಥಾನಕ್ಕೆ ಪ್ರಸವ ದಿನವೇ ನಾಂದಿ
                                             ಕಕ್ಷದ ಸುತ್ತ ಪರಿಬ್ರಮಿಸುವ ಪಾತ್ರ.

                                               ೨.ಪ್ರೀತಿ

ಮನುಷ್ಯ

                                              ಒಮ್ಮೆ 
                                              ಒಂದು ಗುಲಾಬಿಯಿಂದ
                                              ಎರಡು ಜೀವಿಗಳು
                                              ಒಂದಾ
                                              ಗುವಿಕೆಯನ್ನು
                                              ನಾ
                                              ಕಂಡಿದ್ದೆ
                                         "ಒಂದು ಗುಲಾಬಿ, ಎರಡು ಜೀವ ಮತ್ತು ನಾನು"

                               ಒಂದು ಹುಡುಗ ಒಬ್ಬ ಹುಡುಗಿಯನ್ನ ಪ್ರೀತಿಸಿದ
                               ಒಂದು ಹುಡುಗಿ ಒಬ್ಬ ಹುಡುಗಿಯನ್ನ ಪ್ರೀತಿಸಿದಳು
                                     ಮನುಷ್ಯರು ಯಾಕೆ ಪ್ರೀತಿಸುತ್ತಾರೆ?

                               ಈಗ ನನ್ನದೊಂದು ಪ್ರೇಮ ಕಾವ್ಯ
                                         "ಅವಳನ್ನ ಬಿಟ್ಟಿರಲಿಕ್ಕಾಗದಿದ್ದಕ್ಕೆ ಅವಳ ಜೊತೆಗೇ
                                              ಸೇರಲಿಲ್ಲ
                               ಅವಳು ಉತ್ತು ಬಿತ್ತು ಮೊಳಕೆಗೆ ಹೂತಿಟ್ಟು ಬೆಳೆದು
                               ತೆನೆಗೂಡಿಸಿ ಹೊತ್ತು ತಂದು ಕಾಸಿ ಬೇಸಿ
                               ಅನ್ನ ಮಾಡಿಟ್ಟು ಕೊಟ್ಟು ಬಿಟ್ಟಳು"

ಮಣ್ಣು

                                ತಾನೊಂದು ರೂಪ್ವಾಗ್ಬೇಕು ಅಂತೇಳಿ
                                ನೀರ್ನೊಡನೆ ಸೇರಿ
                                ಹೆಂಟೆ ಆತು
                                ಹೆಂಟೆಯಿಂದ ಎರ್ಡು ರೂಪ ಪಡೀತು
 
                                               ಆ ಎರ್ಡು
                                               ರೂಪ್ಗಳು
                                               ಸೇರ್ಲಿಕ್ಕಾಗ್ದೆ
                                               ಮತ್ತೆ ನೀರ್ಗೆ 
                                               ಸೇರಿ ಕರ್ಗಿ
                                               ಒಂದಾತು
                                 ಇದ ಮಣ್ಣ ಪ್ರೇಮ್ಗೀತೆ....

ಮಾತು

                                            "ಜೀವ ಜೀವಕು ಒಂದು ಜೀವದ ಅನುರಣನೆ
                                 ಅದರದೇ ವೃತ್ತಿ ಪ್ರವೃತ್ತಿ ಆವೃತ್ತಿ 
                                 ಒಂದು ಬಂಧದ ಹಿಂದೆ ಸಹಸ್ರ ಸ್ವಾತಂತ್ರ್ಯ ಪಕ್ಷಿ
                                 ಪ್ರೀತಿ ನನ್ನೊಳಗೆ ಮಿಥುನಗೊಂಡ ಪಕ್ಷಿ"

                                                    ೩ ಅಮ್ಮ

ಮನುಷ್ಯ

                                               ಅಮ್ಮ,
                                  ನೆಲದಲ್ಲೆಲ್ಲೋ ಬಿದ್ದ ಮುದ್ದೆ ಮಾಂಸಕ್ಕೆ
                                  ತನ್ನದೇ ರೂಪ, ತನ್ನದೇ ಕಣ್ಣು, ತನ್ನದೇ ಜೇವ ಎಂದೆಯಲ್ಲೆ
                                               ಹೌದು ನಿನ್ನವೆ
                                               ಜೀವ ಎರಡಾಗಿ ಪಡೆದದ್ದು.

                                   ಹುಟ್ಟಿಸಿದೆಯೆಂಬುದಕ್ಕಾಗಿ ಇಷ್ಟೆಲ್ಲಾ ನೀನು ಮಾಡಲಿಲ್ಲ, ಮಾಡಿದ್ದು
                                               ಒಂದು ಭಾವಕ್ಕೆ
                                               ಎಲ್ಲಾ,

                                   ಈ ಕ್ಷಣದಲ್ಲಿ ತಡಬಡಿಸುತ್ತಿದ್ದೇನೆ,
                                                              "ಬದುಕು ಅರ್ಥವಾಗುತ್ತಿಲ್ಲ,
                                               ಯಾಕೆ ಇದು ಹೀಗೆ, ಪ್ರತೀ ಪ್ರಶ್ನೆ"

                                                ಹೋಗಲೇಬೇಕು
                                                ಈ
                                                ಕ್ಷಣ
                                                ನಿನ್ನನ್ನು
                                                ಬಿಟ್ಟು

                                   ನೀನು ಅಮ್ಮ, ನಾನು ಮಗ ಎಂಬೋ
                                                ಭಾವ
                                                ದಲ್ಲಿ ಹೊರಡುತ್ತಿದ್ದೇನೆ.
                                                ಭಾವ ಎರಡಾಗುವುದಿಲ್ಲ
                                                ಆದರೂ ಇರಬಹುದು ಇದೂ ಒಂದು
                                  ನಾನು ಅಮ್ಮನಾಗುವ, ನೀನು ಮಗನಾಗುವ
                                                ಆತ್ಮ ಸಂಗಾತ

ಮಣ್ಣು

                                               ವಿಶಾಲ್ವಾದ ಬೀದಿ
                                               ಅಲ್ಲ, ದೊಡ್ಬಯಲನ್ನ  ಬೀದೀ ಅಂತ ಕರ್ದದ್ದು
                                               ಅಲ್ಲಿ
                                 ಬ್ಯಾವರ್ಸಿಯಾಗಿ, ಬಿಕಾರಿಯಾಗಿ, ಬಿಕ್ರಿಯಾಗೋವರ್ಗು ಓದಾಗ

                                               ಮಣ್ಣು ಆಗ ನನ್ನವ್ವ
                                               ಆಗಿ
                                               ಕಳ್ದೋದೋನು ನಾನು
                                               ಕಳ್ಕೊಂಡೋಳು ನೀನು
                                               ಕಳ್ದೋದ್ಮಗ ದೊರೆತದ್ದಕ್ಕೆ
                                               ಬಿಗಿದಪ್ಪಿ ರಂಬಿಸಿ ಮುದ್ದಿಸಿದೆಯಲ್ಲೆ
                                                              (ನಾನು, ಮಣ್ಣು ಇಬ್ಬರೂ ಅತ್ತು ಬಿಟ್ಟೆವು)

                                               ಏನೂ ಅಲ್ದದು, ಎಲ್ಲಾನೂ ಹುಟ್ಸತ್ತೆ
                                               ತನ್ನೊಳಗಿದ್ದದ್ದನ್ನ ಜೋಪಾನ್ವಾಗಿ
                                               ಕಾಪಾಡಿ ಬೆಳೆಸಿ ಪಸ್ರಿಸುತ್ತೆ
                                               ನನ್ಮಣ್ಣೆ

ಮಾತು

                                     ದಶಮ ರಸವೀ ಮಾತೃತ್ವ , ಎಲ್ಲಿಯದದು ಇಲ್ಲಿ
                                     ಮಣ್ಣು ನನಗೆ ತಾಯಾಯಿತೊ? ಮಣ್ಣಿಗೆ ನಾ ಮಗುವಾದೆನೋ?
                                     ಮಣ್ಣಿಗೆ ನಾ ತಾಯಾಗುವುದೆಂತು?
                                     ಮಣ್ಣು ನನ್ನೊಳಾಡುವ ಮಗುವಾಗುವುದೆಂತು?

                                                             ೪ ಸಂದೇಹ

ಮನುಷ್ಯ

                                      ಮಾಧ್ವ ಸರೋವರದಲ್ಲಿ ಒಂದು ಮೀನು ಕಂಡಿತ್ತು
                                      ಸೀತಾ ನದಿಯಲ್ಲಿ ಒಂದು ಮೀನು ಕಂಡಿತ್ತು
                                      ನಮ್ಮ ಮಾಕಾಹಳ್ಲಿಯ ಉತ್ತರ ಪಿನಾಕಿನಿಯಲ್ಲೂ
                                      ಒಂದು ಮೀನು ಕಂಡಿತ್ತು,
                                      ಮೂರೂ ಕಡೆ ಕಂಡದ್ದು ಒಂದೇ ಮೀನಾ?
                                                         ಅಥವಾ ವಿಭಿನ್ನವಾ?

                                       ಅಂತಃ ಪ್ರಜ್ಞೆಯ ಮೂಲ ಮಾರ್ಗದಿ ಹರಿವ ಭಾವವೇ
                                       ನಿನ್ನ ಆಳ್ವಿಕೆಯಲ್ಲಿ ನಾನೋ? ನನ್ನ ಆಳ್ವಿಕೆಯಲ್ಲಿ ನೀನೋ?
                                       ಅಧಿಕಾರ ಸ್ಥಾಪಿತ ಕ್ರಿಯೆಯ ಹಿಂದಿನ ಪಾಲುದಾರರು ಯಾರು?

                                       ಬದುಕು ಈ ದ್ವಂಧ್ವಗಳಲ್ಲೇ ಮರೆಯಾದೀತೇನೋ ಎಂಬ 
                                       ಭಯದಿಂದ,
                                                ನಾವಿರುವುದು ನಾಲ್ಕು ಆಯಾಮದ ದೇಶಕಾಲ
                                                ಒಂದು ಆಯಾಮದ ಕಾಲ ಮೂರು ಆಯಾಮದ ದೇಶ
                                                ಆಯಾಮವೇ ಮೀರಿ ಹೊರ ನಡೆದರೆ...?
                                       ಶೂನ್ಯ ಆಯಾಮವೂ ಉಂಟು, ಅನಂತ ಆಯಾಮವೂ ಉಂಟು
                                                                                    ಮತ್ತೇ.........

ಮಣ್ಣು

                                       ಒಂದ್ಮೀನನ್ನ ಮಣ್ಣಲ್ಲಿ ಹೂತಿಟ್ರು, ಮಣ್ಣಾತು
                                       ಮೂರ್ಮೀನನ್ನೂ ಮಣ್ಣಲ್ಲಿ ಹೂತಿಟ್ರು, ಮಣ್ಣಾತು
                                       ದ್ವಂಧ್ವ ಅಂತ ಬೆಂದ ಮನುಸ್ಯನ್ನೇ ಹೂತಿಟ್ರು
                                       ಅಯ್ಯಾ ಅದು ಮಣ್ಣಾತು
                                       ಅದ್ಕೆ ಮಣ್ಗೆ ಸಂದೇಹಾನೇ ಇಲ್ಲ.....

                                                ಮಣ್ಣು ಆದದ್ದ ನಾದದಿಂದ
                                                ನಾದ್ಕೆ ಆಯಾಮ್ವಿಲ್ಲ
                                                ಅಂದ್ರೆ
                                       ಮಣ್ಣಲ್ಲಿ ಸೂನ್ಯ ಆಯಾಮ್ವೂ ಉಂಟು, ಅನಂತ ಆಯಾಮ್ವೂ ಉಂಟು
                                       ಅತ್ವಾ
                                       ಮಣ್ಣಲ್ಲಿ ಸೂನ್ಯ ಆಯಾಮ್ವೂ ಇಲ್ಲ, ಅನಂತ ಆಯಾಮ್ವೂ ಇಲ್ಲ

ಮಾತು

                                       ಆತ್ಮ ಸಾಕ್ಷಿಯ ಅಂತಸತ್ವದ ಭಾವಕೇಕೆ ಹೆಸರು?
                                       ಜೀವವುದಿಸಿದ ಶೇಷ ನೋಟಕೆ ಅದೇನು ಅಕ್ಷ ದೃಷ್ಠಿ
                                       ಸಿಲುಕಿದ ವ್ಯಾಖ್ಯಾನಕೆ ಅರ್ಥವೇ ದ್ವೇಶಿ ಬಿಂಬಿ
                                       ಅಂತ್ಯವಲ್ಲದ ಧ್ವಂಧ್ವ ಸತ್ಯಕೊಂದು ನಿತ್ಯಾರಂಬಿ

                                                            ೫ ಸಾವು

ಮನುಷ್ಯ

                                      ನನಗೆ ಎದುರಾದದ್ದು ಅವನ ಕಣ್ಣುಗಳಲ್ಲಿ
                                                   "ಇಪ್ಪತ್ತೈದು ವರ್ಷದ ತುಂಬು ಯವ್ವನ
       ಭಯಂಕರವಾಗಿ ಸಾಧಿಸಿಬಿಡಬೇಕೆಂಬ ಹುಮ್ಮಾಸ್ಸಾಗಲಿ, ಛಲವಾಗಲಿ, ಅವಶ್ಯವಾಗಲಿ
                                      ಯಾವುದೂ ಇರದೆ
                                      ತನ್ನ ಅರ್ದ ಕಟ್ಟಿದ ಸೂರಿಲ್ಲದ ಮನೆಯಲ್ಲಿರಲಿಕ್ಕಾಗದೆ
                                      ನಮ್ಮದೆ ಅರ್ಧ ಬಿದ್ದು ಹೋದ ಮನೆಯಲ್ಲಿ ವಾಸ
                                      ಎಲ್ಲರೂ ಮುದ್ದಾಗಿ ಅವನನ್ನ ಪ್ರಾಣಿ ಅಂತ ಕರೀತಿದ್ದರು.
                                      ಅವನಿಗೂ ಒಂದು ಹೆಸರಿತ್ತು, ಹೆಸರು ಅರುಣ.  
          ಅಪ್ಪ ಅಮ್ಮ ಸತ್ತು ಹೋಗಿದ್ದರು, ಅಕ್ಕ ಓಡಿ ಹೋಗಿದ್ದಳು, ಮದುವೆ ಆಗಿರಲಿಲ್ಲ
                                                               ಇನ್ಯಾರೂ ಇರಲಿಲ್ಲ.

        ಬೆಳಗ್ಗೆ ನನ್ನೊಡನೆ ಜಗಳ ಆಡಿದ, ರೇಗಿಸಿದ, ನಗಿಸಿದ, ಜೊತೆಗೆ ಸಿಕ್ಕದ್ದನ್ನೆಲ್ಲ ತಿಂದವ
                                      ಸಂಜೆ ಅವ ಹುಟ್ಟಿದ ಆಸ್ಪತ್ರೆಯಲ್ಲಿ
                                               ಸುಮ್ಮನೆ
                                               ಮಲಗಿದ್ದ
                                               ಕರೆದ
                                      ಪ್ರಾಣಿಯ ಪ್ರಾಣ ಹೊಗುವ ಕ್ಷಣ 
                                      ಒಮ್ಮೆಗೇ ಉಸಿರೆಳೆದುಕೊಂಡ 
                                               ನನ್ನನ್ನೇ
                                      ನೋಡುತ್ತಿದ್ದ ಅಷ್ಟೆ...
                                               ಪ್ರಾಣ ಹೋಗಿತ್ತು
                                               ನನಗೆ
                                               ಕಾಣದಂತೆ
                                      ಪ್ರಾಣಿ ಸತ್ತಿದ್ದ.

                                               ನನ್ನನ್ನೇ 
                                     ದಿಟ್ಟಿಸಿ ನೋಡುತ್ತಿದ್ದ ಕಣ್ಣುಗಳನ್ನು ಎಂದಿಗೂ ಮರೆಯಲಾರೆ
                                     ಕೆಲವರು
                                     ಹೇಳುತ್ತಾರೆ
                                               ಪ್ರಾಣ ಕಣ್ಣಲ್ಲಿ ಹೋಯಿತು ಅಂತ
                                     ಆಗ ಆ ಕಣ್ಣುಗಳಲ್ಲಿ ಏನೋ ಭಾವವೊಂದು ಕಂಡಿತ್ತು
                                               ಏನದು...?
                                     ಇಂದಿಗೂ ನನಗೆ ತಿಳಿಯುತ್ತಿಲ್ಲ......

ಮಣ್ಣು

                                     ನಾನೂ ನನ್ಮಣ್ಣೂ ಜೊತ್ಗೂಡಿ ನಡ್ವಾಗ
                                                 "ಮಣ್ಣೇ ನಿನ್ಗೆ ಸಾವಂದ್ರೆ ಗೊತ್ತೇ..?"
                                                  "ಏನೋ..? ಆದ್ರೆ ಸಾವ್ನ  ಭಾವ ಕಾಡಿದೆ, ತಟ್ಟಿದೆ."
                                               ಬಾ ಇಲ್ನೋಡು
                                     ಎಂದು ಒಂದು ಮಗಾನ ತೋರ್ತು
                                     ಅದು ಹೆಂಗಿತ್ತು ಗೊತ್ತೆ?
                                               ಗಂಡ್ಸು ನಾನು
                                     ನನ್ನಲ್ಲೂ ಹಾಲೂರ್ತು, ಎದೆ ಸ್ಥನ್ವಾಗಿ ಮೊಲ್ಯಿಂದ ಹಾಲ್ ಜಿನಿಗ್ತು.
                                     ಹಾಲೂಣಿಸ್ಬೇಕೆಂತ ಎತ್ಕೋಳ್ಳೋಕೆ ಮುಂದಾದೆ,
                                               ನಾ ಗಂಡ್ಸು ಎಂಬೋದ ಮರ್ತು
                                     ಮಣ್ತಡೀತು
                                                  "ಆ ಮಗಾನ ಎತ್ತಿ ಬೆಳೆಸ್ಬೇಡ, ಸಾವು ಸನ್ನಿಹಿತ,
                                      ಅದೇ ನನ್ಗೆ ಕಾಡಿದ್ಬಾವ"

                                               ಮನೀಗೆ 
                                               ಹಿಂತಿರ್ಗಿದ್ಮೇಲೆ
                                      ನನ್ ಚಿಕ್ವಯಸ್ಸಿನ್ಮಗುವಿನ್ ಫೋಟೋನ
                                               ನೋಡ್ಬೇಕಂತ
                                               ತೆರ್ದಾಗ, ಅರೆ
                                               ಅಲ್ಲಿ ಕಂಡ್ಮಗ ನಾನೇ,
                                      ನನ್ಸಾವು ಮಣ್ಗೆ ಭಾವವಾಗಿ ಕಾಡಿದ್ಯಾ
                                      ನಾನ್ ಸಾಯ್ತಿರೋದೆಲ್ಲಿ?

ಮಾತು

                                      ಸಂಬಂದವೇ ಇಲ್ಲದ ಕೊಂಡಿಯ ರಚನೆ ಸಾವು ಬದುಕು
                                      ನಿರ್ಮಿತಿಯ ಆಕೃತಿಯೊಳಡಗಿರುವ ಕೃತಿ  ಹರೆಯ
                                      ಕಾಣದ ಜೀವಿಯ ಜೀವವು ಸಾವಿನ ಪ್ರಾತ್ಯಕ್ಷಿಕೆ
                                      ಕಾಡಲಿ ನಡೆವ ವಿಶ್ವ ಯಜ್ಞಕೆ ಮೂರ್ತ ರೂಪದಳೊಡಗಿದೆ ಅಮೂರ್ತ ಬದುಕು.

                                                  ಅಂತ್ಯ

                                      ಪಟ್ಟು ಹಿಡಿದು ವಾಸ್ತವಕ್ಕೆ ಹಂಬಲಿಸಿ
                                      ಕನ್ನಡಿಯ ಬಿಂಬಕ್ಕೆ ಕೊಟ್ಟ ಕಲ್ಲು ಪೆಟ್ಟು
                                      ತಾಕಿದ್ದು
                                      ನನ್ನದೊಂದು ಭಾವ

                                      ವೃತ್ತಗಳಲ್ಲಿನ ವಾಸ್ತವದ ಮುಖಾ ಮುಖಿಗೆ
                                      ಶೂನ್ಯ ಚುಂಬನದ ದಿಗಂಬರ ದೃಷ್ಠಿ 
                                      ಬದುಕಿನ ಸಾರ್ಥಕ್ಯದ ವ್ಯಾಖ್ಯ ಏನು?
                                      ಮನುಷ್ಯ ಮಣ್ಣಾಗುವುದಲ್ಲ
                                      ಮಣ್ಣು ಮನುಸ್ಯ ಆಗೋದು.......

 


ಎಷ್ಟೇ ಜಾಲಾಡಿದರೂ ಕಡೆಗೆ ಎಟುಕಿದ್ದು ಮಾತ್ರಾ ಎರಡೇ ವಿಧ

ಕಡಲ ಮತ್ತೊಂದು ತುದಿ ಸಂಪೂರ್ಣ ಮಿಥ್ಯ
ನನ್ನಾವರಣದಲ್ಲಿನ ಸೀಮಿತ ಸತ್ಯ....

ಕಂದೀಲ ಕೆಳಗಿನ ನೆರಳ ಮೂಲ
ಬೆಳಕೋ ಅಥ್ವಾ ಕಂದೀಲೋ..?

ತರಂಗಗಳಿಂದ ಬಂತು ಸುದ್ದಿ ಕೇಳಿಲ್ಲಿ ಎಂಬಂತೆ
ತಾತನ ಶ್ರಾಧ್ಧಾ, ಅಕ್ಕನಿಗೆ ಗಂಡು ಮಗು
ಹೋಗೊದು ಅಸಂಭವ, ಸಂಭವದ ಪ್ರಶ್ನೆ ಅನೇಕ
ನೆನಪಾಗುತ್ತಿದೆ

ಶೋಧ

ಇಲ್ಲಿ ಎಲ್ಲವೂ ಸ್ಪಟಿಕ ಶುಭ್ರ
ಯಾವುದೂ ಕಾಣುವುದಿಲ್ಲ
ಒಂದಕ್ಕೊಂದು ಮತ್ತೊಂದು ಅದಕೊಂದು
ಹೊಸದದ್ದು ಇಲ್ಲಿ ಎಲ್ಲಾ....

ಕುಟ್ಟಿ ಪುಡಿ ಮಾಡಿ ಕಂಡು ಗೀಚಿ ಬರೆದ ಬರಹ
ಬರೀ ಯಂತ್ರ ತಂತ್ರ ಸುಖಾನುಭವ ಲೋಲುಪತೆ
ಅಲ್ಲವೆ ಅಲ್ಲ....

ಆತ್ಮೋನ್ನತಿಗೆ ಮೂಲಧಾತುವಿನ ಶೋಧ
ತುರೀಯಕ್ಕೆ ಕೈ ಚಾಚಿದ ವ್ಯಕ್ತಿ
ಚಕ್ಕಂಬಕ್ಕಳ ಹಾಕಿ ಕೂತಿದ್ದಾನೆ 
ಕಾಲ ಸ್ಥಬ್ಧವಾಗುವ ಕ್ಷಣಕ್ಕಾಗಿ
ಕಾಲ ಸ್ಥಬ್ಧವಾದಾಗ ಚಲನೆ ಪೂರ್ಣ ಸ್ಥಬ್ಧ....

ಒಳಗಿಂದೊಮ್ಮೆಲೇ ಕೂಗು

"ಅಣ್ಣನ ಮದುವೆಗೆ ಕಡಿಮೆ ಬೆಲೆಯ
ಸೀರೆ ಕೊಟ್ಟನೆಂದು ಹೋ ಎಂಬ ಸದ್ದು"
ಕೂತಿದ್ದವ ಹಾಗೆ ತಿರುಗಿ ನೋಡಿದ

"ಅವಲಕ್ಕಿ, ಪವಲಕ್ಕಿ, ಕಾಂಚನ ಮಿಣಮಿಣ ಡಾಂ ಡಸ್...............

ಬದುಕು, ತೀರಾ ವಿಶಿಷ್ಟವೂ, ವೈಶಿಷ್ಟವೂ, ಆದ....


ಉಗೀ ಬಂಡಿ....., ಈಗ ರೈಲು

ಮೂರನೆ ದರ್ಜೆ ಕಡೇ ಭೋಗಿ
ಮೂರು ಜನ ಕೂರೋ ಜಾಗ ನಾಲ್ಕು ಜನ ಕೂತು

ಚಾಯ್ ಚಾಯ್ ಕಾಫೀ, ಇಡ್ಲಿ, ವಡೆ
ಮದ್ದೂರು ವಡೆ ಸಾಮಿ ಮದ್ದೂರು

"ಶಿವಪ್ಪ ಕಾಯೋ ತಂದೆ ಮೂಲೋಕ ಸಾಮಿ ದೇವ"
ನಕ್ಷತ್ರದಂಚಿನ ನೀಲಿ ಬಣ್ಣದ, ಹೊಟ್ಟೆ ಕಾಣೋ ಪುಟ್ಟ ಬಟ್ಟೆ
ಕೈಯಲ್ಲಿ ಪಾತ್ರೆ

ಮಳೇ ಬರೋ ಹಾಗಿದೆ ಕಿಟ್ಕಿ ಹಾಕಿ

ಹೇ ಮೂದೇವಿ
ಹಾದರಾನ ಚಾದರ ಹೊದ್ದು ಮಾಡ್ಯಳ ಹಾದರಗಿತ್ತಿ
ರಾತ್ರಿ ಹೋದೊನು ಬರ್ಲಿಲ್ನೋಡು ಭೋಳೀಮಗ

ಹೇ ಜೋಕಾಲಿಯಲ್ಲಿ ಮಗು ಕಕ್ಕ ಮಾಡಿದೆ

ಟಿಕೆಟ್..... ಟಿಕೆಟ್.....

ಅಯ್ಯೋ ಸಾಮೀ
ನಾ  ಸಾಮೀ
ನಾನು
ಅದೇ ಅದೇ
ಮಾಕಾಹಳ್ಳಿಯ ನರಸಿಂಘಯ್ಯನವ್ರು
ಇಂಗ್ಲೀಷ್ನವ್ರ ಜಮಾನ್ದಾಗ ಪಟ್ಯಾಲ್ರು
ಆ ನರಸಿಂಘಯ್ಯನವ್ರ ಮಗ ಸುಬ್ಬರಾಯನವ್ರ
ಮಗ ಎಂಕ್ಟಸುಬ್ಬ ನಾನು ಸಾಮಿ
ಅದೇ ನಾ.... ನೂ.....

­ಕ್ಷಮಿಸಿ, ಹೆಸರಿಡಲಾಗದಿದ್ದಕ್ಕೆ


ಆಗ
     ನಾ
ಚಿಕ್ಕವನಿರಬೇಕಾಗಿದ್ದಾಗ
ನನಗೆ
ಜೂಟಾಟ ಮತ್ತು ಕಣ್ಣಾಮುಚ್ಛಾಲೆ
ಬಾಳಾ ಇಷ್ಟ

ಕಾರಣ ಒಂದರಲ್ಲಿ
     ನಾನು
ಸದಾ ಮತ್ತೊಂದಕ್ಕಾಗಿ ಓಡುತ್ತಲೇ ಇರುತ್ತೇನೆ
ಮತ್ತೊಂದರಲ್ಲಿ ಕಣ್ಣಿಗೆ ಕಟ್ಟಿಕೊಂಡು
     ನಾನು
ತಡಕಾಡುತ್ತಿರುತ್ತೇನೆ....


ಈಗ
ನಾ
ದೊಡ್ಡವನಾಗಿರಬೇಕಾಗಿದ್ದಾಗ
ನನಗೆ
ಎರಡು ಸಂಗತಿಗಳು ಅರ್ಥವಾಗಲಿಲ್ಲ
ಒಂದು
ಸ್ನಾತಕೋತ್ತರ ಪದವೀಧರರ ಸ್ವಾಗತ ಸಮಾರಂಭ
ಮತ್ತೊಂದು
ರಕ್ಷಾಬಂಧನ....

ನಾವು
ನಿಮಗಾಗಿ ಏರ್ಪಡಿಸಿದ ಸಮಾರಂಭ ಸ್ವಾಗತ
ಸ್ವಾಗತ ಸಮಾರಂಭಕ್ಕೆ ಆಹ್ವಾನಿಸಲೆಂದು
ನಾ
   ಮತ್ತು
ನಾ
   ಮಾತ್ರ
ಹೋದದ್ದಕ್ಕೆ, ಆಹ್ವಾನಿಸಲು ಉಳಿದವರನ್ನು
ನಾನು
ಕರೆಯಲಿಲ್ಲೆಂದು ಗೋಳಾಡಿದರು
ಅಂದು ನಾನು
ನಮ್ಮ ಪರಿಚೆಯ ಮಾಡಿಕೊಂಡೆವು
ನಾನು
ನನ್ನ ಹೆಸರು
ಊರು ಮಾಕಾಹಳ್ಳಿ
ಸಮಾರಂಭ
ಮುಗಿಯಿತು
ತಿಂಡಿ ತಿಂದು ಕಾಫಿ ಕುಡಿದು ಹೋದರು

ಒಂದು ಮುಗಿಯಿತು ಆದ್ದರಿಂದ ಮತ್ತೊಂದು

ನನಗೆ
ಅಕ್ಕಾ ತಂಗಿ ಯಾರೂ ಇಲ್ಲ
ನಾನು
ಸಾಮಾನ್ಯ ಒಂಟಿ
ಆದರೆ ಮೊನ್ನೆ ರಕ್ಷಾಬಂಧನದ ದಿನ
ಅದೆಲ್ಲೋ ದೂರದ ಊರಿಂದ
ಯಾರೋ ಕಾಣಾದ ಮುಖದಿಂದ
ಬಂದ ಒಂದು
ರಕ್ಷಾಬಂಧನ
ಕೈ ಅನ್ನು ಅಲಂಕರಿಸಿತು...

ನನಗೆ
       ಮೋಹ
ಅವಳಿಗೆ
       ಒಲವು

ಸದಾ
ಅರ್ಥಗಳ ನಿರರ್ಥಕತೆಯ ಸುಳಿಯಲ್ಲೋ
ಶೋಧದಲ್ಲೋ
ಅಥವ ಸಾರ್ಥಕತೆಯ ಹಂಬಲದಲ್ಲೊ
ಆದ್ದರಿಂದ
ನನಗೆ
      ಎರಡೂ
              ಅರ್ಥ
                   ಆಗಲೇ
                           ಇಲ್ಲ

ಮಳೆಯನ್ನ ಹುಟ್ಟೂ ಎಂದೂ ಕರೆಯಬಹುದು


 ಸ್ಥಿತಿ ಎಂಬುದು ಒಂದು ನಿಯಮ
                                ಸ್ಥಿತಿಯೇ ಬದುಕಿನ ಸಹಜ ಸಾವಧಾನ ಕ್ರಿಯೆ.

.... ಕಡೆಗೆ ಒಂದು ಧೀನ ನೋಟದಲ್ಲಿ ಎರಡು ದೃಷ್ಠಿಯಾಗಿ ಸೇರಿ ಬೆಳೆದೂ ಬೆಳೆದೂ ಕ್ಷಣಮಾತ್ರಕ್ಕೆ ತಿಳಿಯದಾಗಿ ಕ್ಷಣವೇ ಅಳಿದುಹೋಗಿ ಹುಟ್ಟು ಸಂಭವಿಸಿತು.......

" ಅ
  ಛೆ
  ಪಾಪ
  ಅಯ್ಯೋ
  ಮುಂದೇನು
  ಪುನರಪಿ ಜನನ
  ಮತ್ತೇನೋ ಇದೆ"

  ... ಮತ್ತದೇನನ್ನೋ ಪಡೆವ ಬಗೆ ಸುಲುಭವಲ್ಲ ಜೀವ ಸುಲಭವಲ್ಲ  ಮಾಕಾಹಳ್ಳಿಯ ಬೀದಿಗುಂಟ ನಡೆದಂತಲ್ಲ
                                                                                                                         ಎಂದಾಗಲೆ....


ಯಃಕಶ್ಚಿತ್ ನೀನು
ಬಯಲಲ್ಲಿ ಮಂಡೆ ಸುಡುವ ಬಂಡೆಯ
ಬಿಸಿಲಲ್ಲಿ ಕುಳಿತು ನಕ್ಷತ್ರಗಳ ಲೆಕ್ಕ
ಧೃವ ಕರೀತಾನೆ

ಬೋಧಿ ಮರ ಪಕ್ಕದಲ್ಲೆ ಶಿಲುಬೆ
ಎದುರಿಗೇ ಕೂತವ ಮಹಾಭೂಪ
ಅಮೃತ ಶಿಲಾ ವಿಕಾಸಕ್ಕೆ
ಮೇಕೊಡೆಯುವ ಚಿಂತೆ

ಗುರುತ್ವಾಕರ್ಷಣೆಯು ಸಹಜ ಇದೆ
ವಿಕರ್ಷಣೆ ? ಹತ್ತು ಮೀರಿ ಹನ್ನೊಂ
ದರ ವೇಗ, ನನ್ನದೇ ಕೃತ್ಯ
ಸತ್ಯ ಧೃವ ನನ್ನವನು


  ....ಆಗ ಅದೇ ಮಾಕಹಲ್ಲಿಯ ದಾರಿಗುಂಟ ನಡೆದಾಗ ದಕ್ಕಿದ್ದಿದು ಪಡೆದಿದ್ದಿದು ಇದನ್ನೇ ನಾ ಮಳೆ ಅಂದದ್ದು.....




"ಕಲ್ಲಿನ ರಥ, ಭೂತವನ್ನು ಕಟ್ಟೋ ಶೃಂಗಾರ
 ಗೆದ್ದಲು ಎಂದೋ ತಿಂದ ಶವಕ್ಕೆ ಸುಗಂದ ಪೂ
 ಸಿ ಕೂರಿಸಿ
 ಉಘೇ ಉಘೇ

ಕೂಗುತ್ತಾ ಕೂಗುತ್ತಾ ಕೈ ಕಟ್ಟಿ ಕೂತಾಗ
ನೆರಳನ್ನೆ ಕೆತ್ತೊ ಉಮೇದು ಅದರಿಂದ ಶಿಲಾ
ಬಾಲೆ ಅದರೊಡೆನೆ ಸಂಭೋಗ, ಸ್ವಪ್ನ ಸ್ಖಲನದ
ಸಂತೃಪ್ತಿ"


.......ಆದ್ದರಿಂದ ಇಷ್ಟೆಲ್ಲಾ ಆದಮೇಲೆ.....


"ವೃತ್ತಾಕಾರದ ಚಲನೆ
 ಆಸಕ್ತಿ ಅಥವ ಧ್ಯೇಯ?
ಕೇಂದ್ರ ತ್ಯಾಗಿ ಹಾಗು ಕೇಂದ್ರಾಭಿಗಾಮಿಯ ನಡುವೆ
ಹಗ್ಗ ಜಗ್ಗಾಟ
ಕೊನೆ ಶುಭಂ."

ಹುತ್ತಗಟ್ಟದೆ.........


ಕಾವ್ಯ ಯಾತಕ್ಕೆ...? ಹಾಗು ಕಾವ್ಯ ಯಾವಾಗ...? ಈ ಪ್ರಶ್ನೆಗಳು ಕಾವ್ಯ ಮೀಮಾಂಸೆಯ ಪಠ್ಯದಲ್ಲಿ ಸುಳಿದಾಡುವ ನಿತ್ಯ ಪ್ರಶ್ನೆಗಳು. ನಾನು ಕಾವ್ಯ ಮಿಮಾಂಸೆಗಿಂತ ಹೊರತಾಗಿ ನನ್ನ ಅನುಭವದ ಘಟನೆಗಳನ್ನ ಇಟ್ಟುಕೊಂಡು ಕಾವ್ಯ ನನಗೆ ದಕ್ಕಿದ ಬಗೆಯನ್ನ ಹೇಳಿಕೊಳ್ಳುತ್ತೇನೆ. ನಮ್ಮ ಮನೆಯಲ್ಲಿ ಯಾವುದೇ ಕಾವ್ಯ ವಾತಾವರಣವಿರಲಿಲ್ಲ. ಚಿಕ್ಕವಯಸ್ಸಿನಿಂದಲೂ ನನಗೆ ಹಾಡುಗಳೆಂದರೆ ಇಷ್ಟ ಇತ್ತು ಅಷ್ಟೆ. ನಾನು ಹೈಸ್ಕೂಲಿನಲ್ಲಿದ್ದಾಗ ನಮ್ಮ ಮೇಸ್ಟ್ರೊಬ್ಬರು ಮೇಸ್ಟ್ರು ಅಂದ್ರೆ ಹೇಗಿರ್ಬೇಕು ಅಂತ ಬರ್ಕೊಂಡು ಬನ್ನಿ ಅಂತ ಹೇಳಿದ್ದ್ರು. ಎಲ್ರೂ ಲೇಖನ ಬರೀತಾ ಇದ್ದಾಗ ನಾನು ಸ್ವಲ್ಪ ಬಿನ್ನವಾಗಿ ಇರಲಿ ಅಂತ ಹೇಳಿ ವಚನದ ರೀತಿ ಏನನ್ನೋ ಬರೆದುಕೊಂಡುಹೋದೆ, ಅದಕ್ಕೆ ನನ್ನ ಮೇಸ್ಟ್ರು ಯಾರೋ ಬರ್ದಿರೋದನ್ನ ಕಾಪಿ ಹೊಡೀತೀಯ ಅಂತ ಬೈದಿದ್ದರು. ನನ್ನ ಮೊದಲ ಕಾವ್ಯ ಪ್ರಯತ್ನ ಆ ರೀತಿ ಹಾಳಾಗಿತ್ತು. ನಂತರ ನಾನು PU ಅಲ್ಲಿ ಓದೂ ಓದೂ ಅಂತ ಕಳ್ದುಬಿಟ್ಟೆ. ಆದ್ದರಿಂದ ನನಗೆ ಸಾಹಿತ್ಯದಬ್ಯಾಸ ಆಗಲೇ ಇಲ್ಲ. ಇಂಜನೀಯರಿಂಗನ್ನು ಬಿಟ್ಟು ಪದವಿ ತರಗತಿಗಳಿಗೆ ಸೇರಿದ ಮೇಲೆ ಮತ್ತೆ ನನ್ನ ಸಾಹಿತ್ಯದ ಅಬ್ಯಾಸ ಶುರು ಆಯಿತು. ಅದೇ ಸಮಯದಲ್ಲಿ ನಮ್ಮ ಮನೇಲಿ TV ಕೇಬಲ್ ಇಲ್ಲದ್ದರಿಂದ ಸಮಯ ಕಳೆಯಲು ಸಾಹಿತ್ಯ ಓದಲು ಆರಂಭಿಸಿದೆ. ಆಗೆಲ್ಲ ನನಗೆ ಏನನ್ನೋ ಸಾದಿಸಬೇಕು, ದೊಡ್ಡ ಹೆಸರು ಮಾಡಬೇಕು ಅಂತೆಲ್ಲ ಆಸೆಗಳಿತ್ತು. ಆಗ ನನಗೆ ಬರೆಯಲಿಕ್ಕೆ ಬರ್ತಾ ಇದ್ದದ್ದರಿಂದ ಬರವಣಿಗೆಯಲ್ಲಿ ಮುಂದುವರೆದರೆ ದೊಡ್ಡ ಹೆಸರು ಮಾಡಬೊಹುದು. ಕವಿ ಸಾಹಿತಿ ಅಂದರೆ ಎಲ್ಲರೂ ಹೊಗಳುತ್ತಾರೆ ಅಂತ ಅನ್ನಿಸಿದ್ದರಿಂದ ಅದೂ ಇದೂ ಬರ್ಯೋದಕ್ಕೆ ಶುರುಮಾಡಿದೆ. ಬರ್ದು ಯಾರ್ಗೂ ತೋರಿಸ್ತಾ ಇರ್ಲಿಲ್ಲ. ನನ್ನ ಗೆಳೆಯನಿಗೆ ತೋರಿಸಿದ್ರೆ ತುಂಬಾ ಉದಾಸೀನವಾಗಿ ನೋಡ್ತಾ ಇದ್ದ. ಆಗ ನಾನು ಸುಮಾರು ಮೂವತ್ತು ಕವಿತೆಗಳನ್ನ ಬರೆದಿದ್ದೆ( ಅವು ಕವಿತೆಗಳೇ ಅಲ್ಲ, ಆಗ ಅದನ್ನೇ ಕವಿತೆ ಎಂದು ತಿಳಿದಿದ್ದೆ). ಅದರಲ್ಲಿ ಯುದ್ದದ ಬಗ್ಗೆ ಒಂದು ಕವನ ಬರೆದಿದ್ದೆ. ಆಗ ನನಗೆ ಅದೇ ಶ್ರೇಷ್ಠ ಕವನ ಅಂತ ಅನ್ನಿಸಿತ್ತು. ಅದಕ್ಕೆ ಕೆಲವು ದೊಡ್ಡ ಕವಿಗಳಿಗೆ ಕಳುಹಿಸಿ ಅವರಿಂದ ಪ್ರತಿಕ್ರಿಯೆಗಾಗಿ ಕಾಯುತ್ತಾ ಕೂತಿದ್ದೆ. ಸಾಮಾನ್ಯಕ್ಕೆ ನಮ್ಮ ದೊಡ್ಡ ಕವಿಗಳು ದೊಡ್ಡದಾಗಿರುತ್ತಾರೆ, ಆದ್ದರಿಂದ ಅವ್ರಿಗ್ಯಾರಿಗು ಉತ್ತರ ಬರ್ಯೋ ಪುರ್ಸೊತ್ತಿರಲಿಲ್ಲ ಅಂತ ಅನ್ನಿಸುತ್ತೆ ಅದಕ್ಕೆ ಯಾರಿಂದಾನೂ ಉತ್ತರ ಬರ್ಲೇ ಇಲ್ಲ. ಆದರೆ ಒಂದು ದಿನ ಒಂದು ಪೋಸ್ಟ ಕಾರ್ಡ ಬಂತು ಬರ್ದದ್ದು ಶ್ರೀ ಸುಮತೀಂದ್ರ ನಾಡಿಗರು. ಆ ಒಂದು ಪತ್ರ ನನ್ನ ಬದುಕಿಗೆ ಒಂದು ಚೊಕ್ಕಟವಾದ ಹಾದಿ ನಿರ್ಮಿಸಿತ್ತು. ಅವರುಹೇಳಿದ್ದರು "ಪ್ರತಿಭೆಯೊಂದೇ ಸಾಲದು ವ್ಯುತ್ಪತ್ಥಿ ಬೇಕು" ಅಂತ. ನಂಗೆ ವ್ಯುತ್ಪತ್ಥಿ ಅಂತ ಅಂದ್ರೆ ಏನು ಅಂತ ತಿಳೀಲಿಕ್ಕೆ ಎರ್ಡು ದಿನ ಹಿಡೀತು. ಅವ್ರು ತುಂಬಾ ಪುಸ್ತಕಗಳ ಹೆಸರನ್ನ ಕೊಟ್ಟು ಮೊದಲು ಕಾವ್ಯ ಅಂದರೆ ಏನು ಅಂತ ತಿಳಿ ಅಂತ ಹೇಳಿದ್ದರು. ಓದಿದೆ ಅಂದಿನಿಂದ ನಿಜವಾದ ಕಾವ್ಯ ಎಂದರೇನು ಅಂತ ತಿಳೀಲಿಕ್ಕೆ ಓದಿದೆ. ಎಲ್ಲಾನು, ಸಾದ್ಯವಾದಷ್ಟೂ ಓದಿದೆ. ಭಾರತೀಯ ಕಾವ್ಯ ಮೀಮಾಂಸೆ, ಸೌಂದರ್ಯ ಸಮೀಕ್ಷೆ, ನವೋದಯ, ನವ್ಯ, ಆದುನಿಕ, ಬಂಡಾಯ, ವಿಮರ್ಷೆ. ಕಡೆಗೆ ಯಾವುದೋ ಕ್ಷಣದಲ್ಲಿ ಕಾವ್ಯ ಅಂದರೆ ಏನು ಅಂತ ತಿಳಿದಿದ್ದೆ. ಅದೇ ಕ್ಷಣ ನಾನು ಹಿಂದೆ ಬರೆದದ್ದನ್ನು ಎಸೆದು ಬಿಟ್ಟೆ. ಸಾಹಿತ್ಯವನ್ನ ನಾನು ಪ್ರಸಿದ್ದನಾಗಲಿಕ್ಕೆ ಉಪಯೋಗಿಸಲು ಹೊರಟನಲ್ಲ ಅಂತ ಬೇಸರವಾಯಿತು. ನಿಜವಾದ ಸಾಹಿತ್ಯದ ಅರಿವು ನಂಗೆ ಆಯಿತು. ಬೆತ್ತಲಾಗಲು ಸಿದ್ದನಾದೆ.

ಅಲ್ಲಿಗೆ ಮುಗಿದುಹೋಗಬಹುದಿತ್ತು, ಆದರೆ ನಾಡೀಗರು ಪತ್ರ ಮುಗಿಸುವ ಮುನ್ನ "ಮೊದಲು ಬದುಕು ಮುಖ್ಯ" ಅಂತ ಹೇಳಿದ್ದರು. ಅರ್ಥವಾಗಲಿಲ್ಲ.  ಯಾವುದನ್ನ ಮುಂಚೆ ಕೇವಲ ಒಂದು ಸಾಲಾಗಿ ಪರಿಗಣಿಸಿದ್ದನೋ, ಯಾವುದನ್ನ ಉತ್ತರ ಎಂದು ಅಂದು ಕೊಂಡಿದ್ದೆನೋ ಅದು ಪ್ರಶ್ನೆಯಾಗಿತ್ತು. ಮೊದಲು ಅಂದರೆ ಏನು, ಬದುಕು ಅಂದರೆ ಏನು, ಮುಖ್ಯ ಎಂದರೆ ಏನು ಹೀಗೆ ಉತ್ತರದಿಂದಲೇ ರೂಪಗೊಂಡ ಪ್ರಶ್ನೆಯ ಹಿಂದೆ ಬಿದ್ದೆ. ಕಾವ್ಯ ಬರೆಯೋದನ್ನ ನಿಲ್ಲಿಸಿದೆ. ಮೊದಲನ್ನ, ಬದುಕನ್ನ, ಮುಖ್ಯವನ್ನ ಅರಿಸಲು ಅದರ ಹಿಂದೆ ಬಿದ್ದೆ. ತತ್ವಶಾಸ್ತ್ರದಿಂದ ಸಿಗಬೊಹುದು ಅನಿಸಿ, ಸಿಕ್ಕ ಸಿಕ್ಕ ಪುಸ್ತಕ ಓದಿದೆ, ಗೀತೆ, ಉಪನಿಷತ್ತು, ಎಲ್ಲವೂ ಸಾಗಿತು. ವಿವೇಕಾನಂದ, ರಾಮಕೃಷ್ಣ, ಅರಬಿಂದೋ, ಶಂಕರ ಎಲ್ಲರನ್ನೂ ಓದಿದೆ.  ಹೀಗೆ ಏನೇನೋ ಮಾಡಿದೆ. ಅಲ್ಲಿ ಏನೂ ದಕ್ಕಲಿಲ್ಲ ಅಂತ ಹೇಳಲಾರೆ, ದಕ್ಕುವುದಕ್ಕಿಂತ ಪ್ರಶ್ನೆಗಳೇ ಹೆಚ್ಚಾಯಿತು.

ಅದೇ ಸಮಯಕ್ಕೆ, ಎರಡು ಸಾವನ್ನ ಕಂಡೆ. ನಿಜದಲ್ಲಿ ಕಂಡೆ. ಸಾವು ಬೀಭತ್ಸವಾಗಲಿಲ್ಲ ಸುಂದರವೂ ಆಗಲಿಲ್ಲ ಬದಲಿಗೆ ಆಟ ತಿಳಿಯದ ಬಾಲಕ ತಡಕಾಡುವಂತೆ ತಡಕಾಡಿದೆ. ಒಬ್ಬ ವ್ಯಕ್ತಿ, ನನಗಿಂತ ಹಿರಿಯನಾದವ ಆದರೂ ನನ್ನ ನೆಚ್ಚಿನ ಗೆಳೆಯನಾಗಿದ್ದ. ಹಾಗು ನನಗೆ ಹೀರೋ. ಏನು ಬೇಕಾದರೂ ಆತ ಮಾಡಬಲ್ಲ ಅನ್ನೋ ನಂಬಿಕೆ. ಎಷ್ಟೊ ಬಾರಿ ಮಾಡಿದ್ದಾ ಕೂಡಾ. ಅತಿ ಶಕ್ತಿವಂತ, ನಂಬಿಕೆ. ಒಂದು ದಿನ ಮದ್ಯಾನ್ಹದ ಹೊತ್ತಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿರಬೇಕಾದರೆ ಒಂದು ಕರೆ ಬಂದಿತು, ಆ ವ್ಯಕ್ತಿ ಆಸ್ಪತ್ರೆಯಲ್ಲಿ ಇದ್ದ. ನನ್ನ ಹೀರೋ ಆಸ್ಪತ್ರೆಯಲ್ಲಿ ಇದ್ದಾನೆ. ಅವನಿಗ್ಯಾರೂ ಇರಲಿಲ್ಲ. ಅಪ್ಪ ನನಗೆ ಹೇಳಿ ಹೋಗು ಎಂದರು. ಹೋದೆ. ಸರ್ಕಾರಿ ಆಸ್ಪತ್ರೆ ಆತನಿಗೇನಾಗಿತ್ತೊ ತಿಳಿಯದು, ವೈದ್ಯರಿಗು ತಿಳಿದಿರಲಿಲ್ಲ. ಬೆಡ್ ಮೇಲೆ ಮಲಗಿದ್ದ. ಎಲ್ಲಾ ಗಲೀಜು ಮಾಡಿಕೊಂಡಿದ್ದ. ವಾಸನೆ ಬರುತ್ತಿತ್ತು. ಯಾರೂ ಅಲ್ಲಿ ಇರಲ್ಲಿಲ್ಲ. ನನಗೆ ವಾಂತಿ ಆಗೋ ರೀತಿ ಆಗಿ ಹೊರಗೆ ಬಂದೆ. ದೊಡ್ಡದಾಗಿ ಉಸಿರೆಳೆದುಕೊಳ್ಳುತ್ತಿದ್ದ. ಹೋದೆ, ನನ್ನೆಡೆಗೆ ನೋಡಿದೆ. ಒಂದು ಉಸಿರು, ದೊಡ್ಡದಾಗಿ ಎಳೆದು ಕೊಂಡು ನನ್ನೆಡೆಗೆ ನೋಡಿದ, ನಾನೂ ನೋಡಿದೆ, ಮತ್ತೆ ಅವ ಸತ್ತಿದ್ದ. ಆ ಕಣ್ಣುಗಳು, ಆ ಕ್ಷಣ, ಏನನ್ನಾದರೂ ಮಾಡು ಎಂಬಂತಿದ್ದ ಅವನ ನೋಟ, ಏನನ್ನೂ ಮಾಡಲಾಗದ ನನ್ನ ಸ್ಥಿತಿ, ಗಬ್ಬು ವಾಸನೆ, ಸುತ್ತ ಮನುಷ್ಯರು.

ಏನೋ ಮತ್ತೆ ಒಂದು ಸ್ಥಿತಿಗೆ ತಲುಪಿದೆ. ಯಾವುದರಿಂದ ಎಷ್ಟು ಕಲಿತೆ ತಿಳಿಯಲಿಲ್ಲ. ಸ್ಮಾಶಾಣದ ಹತ್ತಿರ ಹೋಗಿ ಕೂತು ತಿಳಿಯಲು ಪ್ರಯತ್ನಿಸಿದ್ದಿದೆ. ಆದ್ರು ವಾಸ್ತವದ ಅರಿವಿತ್ತು ಆದ್ದ್ರಿಂದ ಕಾಲೇಜಿಗೆ ಹೋಗುತ್ತಿದ್ದೆ. ಒಳ್ಳೆ ಅಂಕ ತೆಗೆಯುತ್ತಿದ್ದೆ. ಅದೇ ಸಮಯಕ್ಕೆ ನನ್ನ ಪಕ್ಕದ ಮನೆಯ ಮಡಿ ಅಜ್ಜಿ ಸಹ ಸತ್ತರು.  ಅವರಿಗೆ ಉಸಿರಾಡಲು ಆಗುತ್ತಿಲ್ಲ ಅಂತ ಹೇಳಿದಾಗ ನಾನು ಹೋದೆ. ಮನೆಯಲ್ಲಿ ಅಪ್ಪ ಅಮ್ಮ ಇರಲಿಲ್ಲ. ಏನೇನೋ ಮಾಡಿದೆವು. ಉಸಿರಾಡಲಾಗದ ಆ ನೋವನ್ನ ಕಂಡೆ. ಅವರೂ ಸತ್ತು ಹೋದರು. ಅಷ್ಟೆ ಅಂತ ಅನ್ನಿಸಿತು. ಉಸಿರು, ಪ್ರಾಣ ಕಾಡುತ್ತಲಿತ್ತು.

ಮುಂದೆ ನನಗೆ NITK ಸೂರತ್ಕಲ್ಲ್ ನಲ್ಲಿ MSc ಮಾಡಲು ಅವಕಾಶ ದೊರೆಯಿತು. ಅಲ್ಲಿಗೆ ಹೋದೆ. ಇಲ್ಲಿ ಅನೇಕ ಸಂಗತಿಗಳು ನಡೆಯಿತು. ಮೊದಲಿಗೆ ಒಬ್ಬಂಟಿಯಾದೆ. ಒಬ್ಬೊಬ್ಬರೇ ಕಳಚತೊಡಗಿದರು. ಸಂಬಂದಗಳೆಲ್ಲಾ ಅವಶ್ಯಕತೆಗಳಾಗಿ ಕೆಲವರಿಗೆ ಕಂಡವು. ಯಾರನ್ನ ನಾನು ಹೆಚ್ಚು ನಂಬಿದ್ದೆನೋ ಅವನೇ ನನ್ನ ಮೇಲೆ ನಂಬಿಕೇನೇ ಇಲ್ಲ ಎಂದುಬಿಟ್ಟ. ಪೆಟ್ಟು ಬೀಳತೊಡಗಿತ್ತು. ನನ್ನ ಭಾವನೆಗಳನ್ನ ಅರ್ಥ ಮಾಡಿಕೊಳ್ಳದ ಜೀವಿಯೊಂದು ನನಗೆ ಬಾವನೆಗಳೇ ಇಲ್ಲ ಅಂದುಬಿಟ್ಟಿತು. ನನಗೇ ತಿಳಿಯದಂತೆ ಕಲ್ಲಾಗಲು ಸಿದ್ದನಾಗಿದ್ದೆ. ಬದುಕಿನಲ್ಲಿ ದೊಡ್ಡ ಪೆಟ್ಟುಗಳೇ ಬೇಕೆಂದೇನೂ ಇಲ್ಲ, ಪೆಟ್ಟುಗಳೇ ಬೇಕೆಂದೇನೂ ಇಲ್ಲ, ನಮ್ಮ ನೋಟವೇ ನಮಗೆ ಕಲಿಸುತ್ತದೊ ಏನೋ. ಆ ಸಮಯದಲ್ಲಿ ನಾನು ಅತ್ಯಂತ ಗೌರವಿಸುವ ಮಾತೃಸಮಾನರಾದ ನನ್ನ ಅತ್ತಿಗೆ ತೀರಿಕೊಂಡರು. ನಾನು ಅಳಲಾರದಾದೆ. ಕಣ್ಣೀರು ಬರಲೇ ಇಲ್ಲ. ಆ ನೋವು ತುಂಬಾ ಕಾಡ್ತಾ ಇತ್ತು. ಹೇಳಿಕೊಳ್ಳಲಿಕ್ಕೂ ಯಾರೂ ಇರಲ್ಲಿಲ್ಲ. ಯಾರಮುಂದೆಯೂ ಹೇಳಬೇಕು ಅಂತಲೇ ಅನ್ನಿಸಲಿಲ್ಲ. ಆ ನೋವಿನಿಂದ ಒಂದು ಮೂರ್ತಿ ಮೇಲೆದ್ದಿತು. ಹುಟ್ಟು, ಬದುಕೂ, ಸಾವು ಇವೆಲ್ಲವೂ ಪುಸ್ತಕದೊಳಗಿನ ಪದಗಳಿಂದ ಬಿಡುಗಡೆಗೊಂಡಿತು. ಒಂದು ಸುಂದರ ಬದುಕು ಎದುರಿಗೆ ಕಂಡಿತು. ನನ್ನ ಆ ಸ್ಥಿತಿಯಲ್ಲಿ ನನ್ನೆಲ್ಲಾ ದ್ವಂದ್ವಗಳಿಗೆ ಉತ್ತರವಾಗಿ, ಪ್ರೀತಿಯ ಮೂರ್ತಿಯಾಗಿ, ಒಂದು ಸ್ವತಂತ್ರ ಅಸ್ಥಿತ್ವವೊಂದು ನನ್ನ ಎದುರಿಗೆ ಬಂದು ನನ್ನನ್ನು ಅಪ್ಪಿಕೊಂಡಿತು. ಜೀವಂತ ಮೂರ್ತಿ ಎದುರಿಗೆ ಬಂದು ಮಾತಾಡಹತ್ತಿತು. ಅದರೆದುರು ಜೋರಾಗಿ ಅಳಬಲ್ಲವನಾದೆ, ಜೋರಾಗಿ ನಗಬಲ್ಲವನಾದೆ. ಬೆತ್ತಲಾಗಿ, ನಾನು ಪೂರ್ಣ ನಾನಾಗಿ ಅದರ ಮುಂದೆ ನಿಂತೆ. ಅದು ಅಪ್ಪಿಕೊಂಡಿತು. ಅದು ಕಾವ್ಯವಾಗಿತ್ತು. ಹೀಗೆ ಆ ಕ್ಷಣದಲ್ಲಿ ಕಾವ್ಯ ಎಂಬ ಸ್ವತಂತ್ರ್ಯ ಅಸ್ಥಿತ್ವವು ನನಗೆ ಬದುಕಿನ ಎಲ್ಲವನ್ನೂ ತೆರೆದಿಡಲು ಸಿದ್ದವಾಯಿತು. ಕಾವ್ಯ ನನ್ನ ಜೀವನದ ಮಾರ್ಗವಾಯಿತು. ವಿವಿದ ರೂಪಗಳಿಂದ ನನ್ನ ಎದುರಿಗೆ ಬಂದು ನಿಂತಿತು.  ಹಾಗೆ ನನ್ನೆದುರಿಗೆ ನಿಂತದ್ದನ್ನು ತಮ್ಮ ಮುಂದೆ ಇಡುತ್ತಿದ್ದೇನೆ. ಕಾವ್ಯ ನನಗೆ ಬದುಕನ್ನ ಕಲಿಸಿತು. ಬದುಕು ಎಷ್ಟು ಸುಂದರ, ಆನಂದಮಯ ಎಂಬುದನ್ನ ನನಗೆ ಕಾವ್ಯ ಕಲಿಸಿ ಕೊಟ್ಟಿತು.

ಇಷ್ಟೂ ಹೊತ್ತೂ ನನ್ನ ಕಂತೇ ಪುರಾಣವನ್ನೇ ಹೇಳಿದ್ದಾಯಿತು. ಈಗ ಸದ್ಯ ನನ್ನ ಚಿಂತನೆಯಲ್ಲಿ ರೂಪಗೊಂಡ ಕಾವ್ಯದ ಬಗ್ಗೆ ಕೆಲವು ಸಾಲುಗಳು.
ನಮ್ಮ ಜೀವನ ಪದ್ದತಿಯ, ಸಂಸ್ಕೃತಿಯ ಹಾಗು ಚಿಂತನೆಗಳ ಒಟ್ಟೂ ಸ್ವರೂಪವನ್ನ ದಕ್ಕಿಸಿಕೊಳ್ಳಲು ಮಾರ್ಗ ಕಾವ್ಯ. ಅದು ಅಂದಿನ ವಾಲ್ಮೀಕಿಯಿಂದ ಇಂದಿನವರೆಗೂ ನಡೆದುಕೊಂಡು ಬಂದ ಪರಂಪರೆ. ಅದು ಭಾರತೀಯದ್ದಾಗಿರಬೊಹುದು ಅಥವಾ ಪಾಶ್ಚಾತ್ಯರದ್ದಾಗಿರಬೊಹುದು. ಯಾವ ರೀತಿ ನಮ್ಮ ಚಿಂತನೆಗಳು ವಿಸ್ತಾರಗೊಳುತ್ತವೆಯೋ ಅದೇ ರೀತಿ ಕಾವ್ಯ ವಿಸ್ತಾರವಾಗಿ ದಕ್ಕುತ್ತದೆ. ಚಿಂತನೆಗಳು ಕಾಲ ದೇಶವನ್ನ ಮೀರಿ ವಿಶ್ವಾತ್ಮಕಗೊಂಡಾಗ ವಿಶ್ವಾತ್ಮಕಗೊಂಡ ಕಾವ್ಯ ದಕ್ಕುತ್ತದೆ. ಆದರೆ ಇಂದು  ಪ್ರಸ್ಥುತ ಸಂದರ್ಭದಲ್ಲಿ ಚಿಂತನೆಗಳು ವಿಶ್ವಾತ್ಮಕಗೊಳ್ಳುವ ಬದಲಾಗಿ ಸಂಕುಚಿತಗೊಳ್ಳುತ್ತಿದೆ. ಅದು ಎಂದಿಗೂ ಮಾರಕ. ಇಂದಿನ ಕನ್ನಡ ಕಾವ್ಯ ಇಂದಿಗೂ ಸುತ್ತಿದ್ದಲ್ಲೇ ಸುತ್ತುತ್ತಿದೆ ಎಂದೇ ನನಗನಿಸುತ್ತಿದೆ. ತ್ವರಿತವಾಗಿ ಮುದ್ರಣಗೊಳ್ಳುವ ವ್ಯವಸ್ಥೆ, ಹೆಚ್ಚು ಪತ್ರಿಕೆಗಳು, ಏನನ್ನಾದರೂ ಪ್ರಕಟಿಸಲೇಬೇಕಾದ ಅವಶ್ಯಕತೆ ಹಾಗು ಎಲ್ಲಕ್ಕಿಂತ ಮುಖ್ಯವಾಗಿ ತ್ವರಿತವಾಗಿ ತಲುಪಿಸಬೇಕಾದ ವ್ಯಾಪಾರೀ ಅನಿವಾರ್ಯತೆ ಎಲ್ಲವೂ ಸೇರಿ ಮರ ಸುತ್ತುತ್ತಿದೆ ಕನ್ನಡ ಕಾವ್ಯ. ಇದಕ್ಕೆ ಸರಿಯಾಗಿ ಕೆಲವು ಬಣಗಳು ಏರ್ಪಟ್ಟು ಎಲ್ಲವನ್ನೂ ವಿಶ್ವವಿದ್ಯಾಲಯದ ಪದವಿಗೆ, ಪುಸ್ತಕ ಬಿಡುಗಡೆಗಳಿಗೆ, ವಿಮರ್ಶೆ ಎಂಬೋ ಹೊಗಳು ಭಟ್ಟಂಗಿಗಳಿಗೆ ಸೀಮಿತಗೊಳಿಸಿ ಅದನ್ನೇ ಕಾವ್ಯ ಎಂದು ಸಿದ್ದವಾಗಿಸಲು ಸದಾ ಪ್ರಯತ್ನಿಸುತ್ತಿದೆ ಹಾಗು ಸಪಲವಾಗಿದೆ. ಇವುಗಳನ್ನೆಲ್ಲಾ ದಿಕ್ಕರಿಸುತ್ತೇನೆ. ಪಡೆಯುವಿಕೆ ಅತ್ಯಂತ ಸಂಕುಚಿತಗೊಂಡ ಸಮಯದಲ್ಲಿ ನಾನು ಬರೆಯುತ್ತಿದ್ದೇನೆ. ಮನುಷ್ಯನ ಜ್ಞಾನವು ಸಂಯುಕ್ತತೆಯಲ್ಲಿ ಪೂರ್ಣ ರೂಪವನ್ನ ಪಡೆಯುತ್ತದೆಯೇ ವಿನಃ ವಿಘಟನೆಯಲ್ಲಿ ಅಲ್ಲ. ಆದ್ದರಿಂದ ಕಾವ್ಯಕ್ಕೆ ತನ್ನ ಹಿಂದಿನ ಕಾವ್ಯ ಪರಂಪರೆ ಎಷ್ಟು ಮುಖ್ಯವೋ ಆಷ್ಟೇ ಇತಿಹಾಸ, ಸಮಾಜ ಶಾಸ್ತ್ರ, ವಿಜ್ಞಾನ, ಕೂಡ.  ಆದುನಿಕ ತತ್ವಶಾಸ್ತ್ರ , ಸಾಪೇಕ್ಷತಾ ಸಿದ್ದಾಂತ, ವಿಕಾಸವಾದ, ಹಾಗು ಕ್ವಾಂಟಮ್ ಬೌತಶಾಸ್ತ್ರ ಬದುಕನ್ನ ಕಾಣುವ ಬಗೆಯನ್ನೇ ಬದಲಿಸಿ ಬಿಡುತ್ತದೆ. ಇವೆಲ್ಲವೂ ಇಂದಿನ ಕಾವ್ಯಕ್ಕೆ ಅವಶ್ಯವಿದೆ ಎಂಬ ಪೂರ್ವ ಪ್ರಜ್ಞೆಯಿಂದ ಸ್ವೀಕಾರಕ್ಕೆ ತೆರೆದುಕೊಂಡಿದ್ದೇನೆ. ಧ್ಯಾನಸ್ಥ ರೀತಿಯಲ್ಲಿ ಒಳನೋಟದಿಂದ ರೂಪಗೊಳ್ಳುವ ಕೃತಿಗೆ ಸದಾ ಹೊರನೋಟವೇ ಮಾದರಿಯಾಗಬೇಕು. ಆದ್ದರಿಂದ ಮಾದರಿಗಳನ್ನ ಹೊರಗಿನಿಂದಾನೆ ಪಡೆದಿದ್ದೀನಿ. ಕಾಣುವುದಕ್ಕಾಗಿಯೇ ಸಿದ್ದನಾಗಿದ್ದೇನೆ. ಕಾಣುವುದು ಎಂಬುದು ನಿತ್ಯ ನಿರಂತರವಾಗಿ ಸಾಗುತ್ತಲೇ ಇರಬೇಕೆಂದು ಬಾವಿಸಿದ್ದೇನೆ.

ನನಗೆ ಬಂದ ಪ್ರತಿಕ್ರಿಯೆಗಳೇನೆಂದರೆ "ಕಾವ್ಯ ಅರ್ಥವಾಗುವುದಿಲ್ಲ" ಎಂದು. ನನಗೆ ಇಲ್ಲೀ ವರೆಗು ಅರ್ಥ ಎಂದರೇನು ಎಂಬುದೇ ತಿಳಿದಿಲ್ಲ. ಯಾಕೆ ಇಂದಿನ ಕವಿತೆಗಳು ಅರ್ಥವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ? ಅದು ಇಂದಿನ ಜೀವನ ಪದ್ದತಿಯಮೇಲೆ ಅವಲಂಬಿಸಿದೆ. ಎಲ್ಲೋ ಹತ್ತು ನಿಮಿಷ ಸಮಯ ಸಿಕ್ಕಿದೆ ಅಲ್ಲಿ ಕವನ ಓದೋದು, ಏನ್ ಕಾವ್ಯ ಅಂದರೆ ಪಾನೀ ಪೂರೀನ. ಕಾವ್ಯ ದಕ್ಕಿಸಿಕೊಳ್ಳುವುದಕ್ಕೇ ಒಂದು ಭಾವ ಬೇಕು.ಅದಕ್ಕೆ ವೇಗದ ಬದುಕಿನಿಂದ ಅಪಾಯ. ವಿಕಾರವಾಗಿ ಬೆಳವಣಿಗೆಗೆ ತೆರೆದುಕೊಂಡ ಪ್ರಜ್ಞೆಗೆ ವಿಕಾಸಕ್ಕೆ ಎಡೆ ಮಾಡುವುದಿಲ್ಲ. ಕಾವ್ಯಾಸ್ವಾದನೆ ಎಂಬೋದು ಪ್ರಜ್ಞೆಯ ವಿಕಾಸದಿಂದ ರೂಪಗೊಳ್ಳಬೇಕಾದಂತಹುದು. ಅದು ಅತೀ ತ್ವರಿತವಾಗಿ ಅರ್ಥವಾಗಿಬಿಡಬೇಕು ಎಂಬೋದು ಮೂರ್ಖತನ. ಕಾವ್ಯಾಸ್ವಾದನೆಯಲ್ಲಿ ಎರಡು ಪ್ರಜ್ಞೆಯ ಮಿಲನವಾಗಬೇಕು. ಒಂದು ಕಾವ್ಯದ್ದೇ ಆದ ಸ್ವತಂತ್ರ್ಯ ಪ್ರಜ್ಞೆ ಮತ್ತೊಂದು ಕಾವ್ಯರಸಿಕನ ಪ್ರಜ್ಞೆ. ಹೀಗೆ ಇವೆರಡರ ಮಿಲನವಾದಾಗ ಅರ್ಥ ಧ್ವನಿಸುತ್ತೆ. ಹಾಗೆ ಮಿಲನಗೊಳ್ಳಲು ಮನಸ್ಸೂ, ಬುದ್ದೀ ಎಲ್ಲವೂ ಸ್ಥಿರತೆಯಲ್ಲಿರಬೇಕು, ಮಿಲನಕ್ಕೆ ತಾಳ್ಮೆಯಿರಬೇಕು. ಹಂತ ಹಂತವಾಗಿ ಏರುತ್ತಾ ಆ ಕಡೆಯ ಹಂತವನ್ನ ಮುಟ್ಟಬೇಕು. ಹೀಗೆ ಮಾಡಲಾಗದವ ಮಾತ್ರ ಕಾವ್ಯ ಅರ್ಥವಾಗುತ್ತಿಲ್ಲ ಎಂದು ಹೇಳುವುದು. ಆತ ಕಾವ್ಯ ಓದಲಿಕ್ಕೇ ನಾಲಾಯಕ್ಕು.

ಕಾವ್ಯದ ಪ್ರಜ್ಞೆಯ ಬಗೆಗೆ ಮಾತನಾಡಿದೆ. ಹೀಗೆ ಮಾತನಾಡಾಲಿಕ್ಕೆ ಕಾರಣವೂ ಇದೆ. ನನ್ನ ಮಟ್ಟಿಗೆ ಕಾವ್ಯಕ್ಕೆ ತನ್ನದೇ ಸ್ವತಂತ್ರ್ಯ ಪ್ರಜ್ಞೆಯಿದೆ. ಅದು ಕೃತಿಕಾರನಿಗೂ ಅವಲಂಬಿಸಿರೋದಿಲ್ಲ. ಕಾವ್ಯಾಸ್ವಾದಿಗೂ ಅವಲಂಬಿಸಿರೋದಿಲ್ಲ. ಅದು ಸರ್ವ ಸ್ವತಂತ್ರ್ಯ ಪ್ರಜ್ಞೆ.  ಇದು ನಾನು ಕಂಡುಕೊಂಡ ಸತ್ಯ. ಅದಕ್ಕೇ ಹೇಳಿದ್ದು ನನಗೆ ಕಾವ್ಯ ಒಂದು ವ್ಯಕ್ತಿಯಾಗಿ ಕಂಡದ್ದು ಅಂತ. ಸುಮ್ಮನೇ ಕೂತಾಗ ಅದೇ ರೂಪಗೊಳ್ಳುವ ಬಗೆಗೆ ಬೆರೆಗಾದೆ. ಹಾಗೆ ರೂಪಗೊಳ್ಳಲಿಕ್ಕೆ ಅಲ್ಲೊಂದು ಮಿಲನವಾಗಬೇಕು. ಕಾವ್ಯದ ಪ್ರಜ್ಞೆಯ ಜೊತೆ ಕೃತಿಕಾರನ ಮಿಲನ ಕೃತಿಯನ್ನ ಸೃಷ್ಠಿಸುತ್ತೆ. ಹಾಗಾದಾಗ ಆ ಕೃತಿಯಲ್ಲಿ ಬರೀ ಪದಗಳಿರೋದಿಲ್ಲ, ಪದಗಳು ಕೇವಲಾ ಅಮೂರ್ತ ರೂಪದ ಮೂರ್ತ ರೂಪಗಳು ಅಷ್ಟೆ. ಪ್ರಜ್ಞೆ ದೇಹವನ್ನ ಅವಲಂಬಿಸಿರುವಂತೆ ಕಾವ್ಯ ಪದಗಳನ್ನ ಅವಲಂಬಿಸಿರುತ್ತೆ ಅಷ್ಟೆ. ಹೀಗೆ ಕಾವ್ಯ ನನ್ನಲ್ಲಿ ರೂಪಗೊಳ್ಳುತ್ತೆ. ಯಾರಿಗಾಗಿಯೂ ನಾನು ಕಾವ್ಯ ಬರೆಯುತ್ತಿಲ್ಲ. " ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ...... ಹಾಡುವುದು ಅನಿವಾರ್ಯ ಕರ್ಮ ನನಗೆ....". ಹೊಸಕಾವ್ಯ ಮಾರ್ಗದಲ್ಲಿ ನಡೆಯಬೇಕೆಂದೂ ಕಾಣಬೆಕೆಂದೂ ಸಿದ್ದನಾಗಿದ್ದೇನೆ. ಮೇಲಿನದರಲ್ಲಿ ಎಷ್ಟೋ ಮಂದಿಯ ಪ್ರಭಾವ ಸೇರಿರುತ್ತದೆ ಅದನ್ನ ಮೀರಿ ನನ್ನದನ್ನ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಅದು ಎಷ್ಟರ ಮಟ್ಟಿಗೆ ಸಿದ್ದವಾಗುತ್ತೆ ಎಂಬೋದು ಕಾದು ನೋಡುತ್ತಿದ್ದೇನೆ. ಮುಂದೆ ಮೇಲೆ ಹೇಳಿದ ಅಬಿಪ್ರಾಯಗಳು ಬದಲಾಗಬೊಹುದು. ಬದಲಗ್ಬೇಕು. ಪ್ರಜ್ಞೆ ವಿಸ್ತಾರಗೊಳುತ್ತಲೇ ವಿಶ್ವಾತ್ಮಕಗೊಳ್ಳಬೇಕು. ಕಾವ್ಯ ನನಗೆ ಮಾರ್ಗ, ಅದೇ ನನ್ನನ್ನ ಕರೆದುಕೊಂಡು ಹೋಗುತ್ತದೆ.

ಕಾವ್ಯದ ಬೆಗ್ಗೆ ಆಸಕ್ತಿಯಿರುವವರು ಯಾರು ಬೇಕಾದರೂ ನನ್ನ ಹತ್ತಿರ ಸಂಭಾಷಿಸಬಹುದಾಗಿದೆ. ಆ ರೀತಿಯ ಸಂವಾದಗಳಿಂದ ನಾನು ಏನನ್ನಾದರೂ ಅರಿಯುತ್ತೇನೆಂಬ ಹಂಬಲ ನನ್ನದು. ಬನ್ನಿ ಜೊತೆಗೂಡಿ ಹೊಸ ಕಾವ್ಯವನ್ನ ದಕ್ಕಿಸಿಕೊಳ್ಳೊಣ. ಹಿರಿಯರಲ್ಲಿ ನನ್ನದೊಂದು ವಿನಂತಿಯೆಂದರೆ ಕಿರಿಯರೊಡನೆ ಬೆರೆಯಿರಿ. ಬಿಟ್ಟು ಬನ್ನಿ ನಿಮ್ಮ ದಂತ ಗೋಪುರಗಳನ್ನ. ಹಳೆಬೇರು ಹೊಸಚಿಗುರು ಸೇರಿದರೆ ಮರ ಸೊಬಗು ಎಂಬುದು ತಿಳಿದಿದೆ. ನನಗೆ ಗೊತ್ತು ನನ್ನ ಸತ್ವ ಇರುವುದು ಬೇರುಗಳಲ್ಲೇ ಎಂದು. ಆದ್ರೆ ಅದೆಕೋ ಬೇರಿಗೆ ಚಿಗುರು ಕಾಣುತ್ತಿಲ್ಲ. ಬೇರಿಗೆಲ್ಲಾ ಆ ಅಹಂ ಇದೆ. ನನ್ನಿಂದಲೇ ಮರ ಎಂಬೋದು. ಆದ್ರೆ ಚಿಗುರಿಲ್ಲದೆ ಮರ ಬೆಳೆಯುವುದಿಲ್ಲ ಎಂಬ ಅರಿವು ಬೇರಿಗಾದಾಗ ಮರದ ಬೆಳವಣಿಗೆ ಸಾದ್ಯ. ಇನ್ನು ನನ್ನ ಕವನಗಳನ್ನ ನೀಡುತ್ತಿದ್ದೆನೆ. ಇವುಗಳು ಸುಮಾರು ಮೂರು ವರ್ಷಗಳ ಕಾಲಾವದಿಯಲ್ಲಿ ರೂಪಗೊಂಡವುಗಳು. ಎಲ್ಲವೂ "ಕೆಂಡಸಂಪಿಗೆ"ಯಲ್ಲಿ ಪ್ರಕಟವಾದವುಗಳು. ಅಬ್ದುಲ್ ರಶೀದ್ ರವರಿಗೆ ದನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಕಿರಿಯನೊಡನೆ ಬೆರೆತು ಆಗಾಗ ಸಲಹೆಗಳನ್ನಿತ್ತ ಶ್ರೀ ಕೆ. ವಿ. ತಿರುಮಲೇಶ್ ರವರಿಗೂ ವಂದಿಸುತ್ತಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಶ್ರೀ ಸುಮತೀಂದ್ರ ನಾಡಿಗರಿಗೆ ವಂದನೆಗಳು. ಇನ್ನು  ಕವನಗಳು.  

ಬೆತ್ತಲಾಗಿ ಬಯಲಾಗುವ ಮುನ್ನ

                                       
"ಸಾಕ್ಷಿಪ್ರಜ್ಞೆ--ಎಲ್ಲವನ್ನೂ ಸಾಕ್ಷಿಯಾಗಿ ನೋಡುವ ನಿಲುವು"
                                                           ..ಕನ್ನಡ ನಿಘಂಟು
"ತನ್ನತನದ ಅರಿವು ಮನುಷ್ಯತ್ವದ ವಿಶೇಷ ಲಕ್ಷಣ......ಮನುಷ್ಯತ್ವದ ವಿಶೇಷಲಕ್ಷಣವಾದ ಈ ಸಾಕ್ಷಿಪ್ರಜ್ಞೆಯ ಬೆಳವಣಿಗೆಯೆ ಮನುಷ್ಯನ ನಿಜವಾದ ಬೆಳವಣಿಗೆ ಎನ್ನಬಹುದು...."  
                                                          ಗೋಪಾಲಕೃಷ್ಣ ಅಡಿಗ     "ಸಾಕ್ಷಿಯ ಮುನ್ನುಡಿಯಲ್ಲಿ"


ಬರವಣಿಗೆಯನ್ನ ಆರಂಬಿಸಿದ್ದೇನೆ. ನನ್ನೊಡನೆ ನಡೆವ ನಿತ್ಯ ಮುಖಾಮುಖಿ. ಸಮಾಜದೊಡನೆ ಸಂವಾದ. ಸಾಕ್ಷಿಪ್ರಜ್ಞೆಯ ಹಾದಿ. ನಾನು ಯಾಕೆ ಬರೆಯುತ್ತೇನೆ ಇನ್ನೂ ಅಷ್ಟು ಸ್ಪಷ್ಟವಾಗಿಲ್ಲ. ಆದರೆ ಬರೆಯದೆ ಹೋದರೆ ಉಸಿರುಕಟ್ಟಿದಂತೆ ಆಗುತ್ತದೆ. ಆ ಕಾರಣಕ್ಕೆ ಬರೆಯುತ್ತೇನೆ. ಈಗ ಈ ಬ್ಲಾಗ್ ಅನ್ನು ಆರಂಬಿಸಿ ಅದರಲ್ಲಿ ನನ್ನ ವಿಚಾರಗಳನ್ನು ತಿಳಿಸಲು ಹೊರಟಿದ್ದೇನೆ. ನನ್ನೆಲ್ಲಾ ಗೆಳಯರಿಗೆ ಒಂದು ವಿಚಾರವನ್ನ ಹೇಳಬೇಕಿದೆ. ನಾನು  ಕಾಲ ಹರಣಕ್ಕೆ ಬರೆಯುತ್ತಿಲ್ಲ. ಆದ್ದರಿಂದ  ಕಾಲಾಹರಣಕ್ಕಾಗಿ ಓದಬೇಕೆಂದು ಬಯಸುವವರು ದಯವಿಟ್ಟು ಇದನ್ನ ಓದಬೇಡಿ. ನಿಮ್ಮ ಸಮಯ ವ್ಯರ್ಥ. ಬೇರೇನನ್ನಾದರೂ ಮಾಡಿ. ಬರವಣಿಗೆ ನನ್ನನ್ನು ಹುಡುಕಿಕೊಳ್ಳುವ ತವಕದ ಹಾದಿ. ಇಲ್ಲಿ ನನ್ನನ್ನೇ ನಾನು ಪ್ರಶ್ನಿಸಿಕೊಳ್ಳಬೇಕಿದೆ. ಆ ಪ್ರಶ್ನೆಗಳಿಗೆ ಹಾಗು ನನ್ನಲ್ಲೆ ನನಗೆ ಕಂಡ ಉತ್ತರಗಳಿಗಾಗಿ ಈ ಬರಹಗಳು. 

ಅಂತರಂಗದ ಭಾವಗಳನ್ನ ವೀಕ್ಷಿಸುವಾಗ ಸದಾ ನನ್ನಲ್ಲಿ ದ್ವಂದ್ವಗಳಿಂದ ಸರಿ ತಪ್ಪುಗಳ ಪ್ರತೀ ಲೆಕ್ಕಾಚಾರಗಳು ಏಳುತ್ತಲೇ ಇರುತ್ತವೆ. ಬದುಕನ್ನು ದರ್ಶಿಸುವ ಮಾರ್ಗಗಳಲ್ಲಿ ಸಾಗುವಾಗ ನಿತ್ಯವೂ ದ್ವಂದ್ವಗಳೊಳಗಿಂದ ವೀಕ್ಷಣೇ ಆರಂಭ. ಈ ಹಲವು ವರ್ಷಗಳಲ್ಲಿ ಬದುಕಿನ ಧ್ವನಿಗ್ರಹಿಕೆಯ ಮಾರ್ಗಗಳ ಶೋಧನೆಯಲ್ಲಿ ನಿರತನಾದಾಗ ಹಲವು ಮಾರ್ಗಗಳಲ್ಲಿ ಬದುಕನ್ನು ಸ್ವೀಕರಿಸುವುದು ಅವಶ್ಯವಾಗಿ ಕಂಡು ಬಂದಿದೆ. ಆ ದರ್ಶನವು ಸಾಕ್ಷಿಪ್ರಜ್ಞೆಯ ಪಥದಲ್ಲಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನ ಕರ್ತವ್ಯ. ಸದ್ಯದ ಸ್ಥಿತಿಯಲ್ಲಿ ಎಲ್ಲಾ ದಿಕ್ಕುಗಳಲ್ಲೂ ಅನುಮಾನ ಆಕ್ರಮಣದಿಂದ ಕೂಡಿದ್ದರೂ ಎಲ್ಲೋ ಒಂದು ಕಡೆ ನಂಬಿಕೆ, ಜೀವನ ಪ್ರೀತಿ, ತುಂಬಿದೆ. ಅದು ಎಲ್ಲಿ? ಹೇಗಿದೆ? ಹೇಗೆ ಅದನ್ನ ಪಸರಿಸಬೊಹುದು. ಇವೆಲ್ಲವು ನನಗೆ ಕಾಡುತ್ತಿರುವ ಪ್ರಶ್ನೆಗಳಾಗಿದೆ. 


ಸಿದ್ದ ಉತ್ತರಗಳನ್ನ, ಸಿದ್ದ ಮಾತುಗಳನ್ನ ದಿಕ್ಕರಿಸುತ್ತಿದ್ದೇನೆ. ನನ್ನ ಮಾತುಗಳ್ಯಾವುದಕ್ಕೂ ಉತ್ತರಗಳಿಲ್ಲ. ಅಥವ ನನಗೆ ಉತ್ತರಗಳು ಗೊತ್ತಿಲ್ಲ. ಹಾಗಾದರೆ ಇದೇನು, ಅಥವ ಇದ್ಯಾತಕ್ಕೆ ಅಂತ ಕೇಳಿದರೆ ಉತ್ತರ ಹುಡುಕಲಿಕ್ಕೆ ಹೋಗುತ್ತಿದ್ದೇನೆ ಅಂತ ಹೇಳಲಿಕ್ಕೆ. ಸದ್ಯ ಇರುವುದನ್ನ, ಹಳಸಿದ್ದನ್ನ, ಗಬ್ಬುನಾತ ಬೀರುತ್ತಿರುವುದನ್ನ ಕಿತ್ತು ಹೊರಟುಹೋಗಲಿಕ್ಕೆ. ಸಾಕಾಗಿ ಹೋಗಿದೆ ಪದಗಳ ತೆವಲು. ಎಲ್ಲೆಲ್ಲೂ ಅಪ್ರಾಮಾಣಿಕತೆ, ಸುಮ್ಮನೆ ಹೇಳ್ತಾ ಇಲ್ಲ. ಎಲ್ಲವನಿಗೂ ಅದೇ ಬೇಕು. ಅದೇ ಪದಗಳು, ವಿಚಿತ್ರ ಅರ್ಥಗಳು, ಸೂಟುಗಳು ಅಲ್ಲೊಂದು ಮೈಕು. ಕೂಗುವ ಮಂದಿ. ಚಪ್ಪಾಳೆ ತಟ್ಟುವ ಮಂದಿಗೆ ಬಿಸಿ ಬಿಸಿ ಚಹ. ಗುಲಾಮರು ಇವರು. ಅವರ ಪ್ರತೀ ಮಾತಿಗೆ ಸ್ವಲ್ಪ ಜಾಗ. ಅದು ಏನೋ ವಿಶಿಷ್ಟ ಎಂಬಂತೆ. ಮೊದಲು ಪುಟ್ಟದಾಗಿ ಮಾತು ಶುರುಮಾಡಿದೆ. ಮಾತಿಗೆ ಸಿಕ್ಕ ಪ್ರತಿಕ್ರಿಯೆ ಹಚಾ ಹಚಾ ಎಂಬಂತೆ ಇತ್ತು. ಇರಲಿ ಎಂದುಕೊಂಡು ಕೇಳುವವರ್ಯಾರಾದರೂ ಇರಬೊಹುದೇನೋ ಎಂದು ಕೊಂಡು ಸ್ವಲ್ಪ ಜೋರಾಗಿ ಹೇಳಿದಾಗ ಕೇಳುವವರಿರಲಿಲ್ಲ. ಅದು ನನ್ನದೇ ತಪ್ಪೇನೋ ನನಗೆ ಪ್ರಿಯವಾಗುವಂತೆ ಹೇಳಲು ಆಗಲಿಲ್ಲ. ಆದ್ದರಿಂದ ಮೌನವಾಗಿ ಬರೆದೆ. ಜನ ಹೇಳಿದರು ಅರ್ಥವಾಗುತ್ತಿಲ್ಲ ಅಂತ. ಜನ ಅಲ್ಲ, ನನ್ನ ಸುತ್ತಲಿನವರು ಅಂದರು ನೀನೇ ಅರ್ಥವಾಗುತ್ತಿಲ್ಲ ಅಂತ. ಅರ್ಥಕ್ಕೆ ಅರ್ಥವೇ ಇಲ್ಲದ ಹೊತ್ತಲ್ಲಿ ನಾನಿದ್ದೇನಲ್ಲ ಅಂತ ಬಯವಾಯಿತು. ಕಡೆಗೆ  ಜೋರಾಗಿ ಕಿರುಚಿದಾಗ ಎಲ್ಲಿತ್ತು ಎಲ್ಲ ಯಾವುದೇ ಪ್ರತಿದ್ವನಿಯೂ ಇಲ್ಲ. ಈಗ ಕಿರುಚುವುದನ್ನು ಬಿಟ್ಟು ಮೌನವಾಗಿದ್ದೇನೆ.

ನಾ ಹೇಳುತ್ತಿರುವುದಕ್ಕೆ ಚೌಕಟ್ಟು ಇಲ್ಲ. ನಾ ಹೇಳುತ್ತಿರುವುದಾದರೂ ಏನು ಎಂಬುದಕ್ಕೆ ಸಿದ್ದವಾದ ಸಂಕೇತವೂ ಇಲ್ಲ. ಚದುರಿದೆ ಇಲ್ಲಿ, ಎಲ್ಲಾ ಚದುರಿದೆ. ವಿಚಾರಗಳು, ಚಿಂತನೆಗಳು ಎಲ್ಲವೂ ಚದುರಿವೆ. ಆ ಚದುರಿದ್ದನ್ನು ಚದುರಿದಂತೆಯೇ ಮುಂದಿಟ್ಟಿದ್ದೇನೆ. 

ನನಗೆ ಮನುಷ್ಯನೇ ಪ್ರೇರಣೆ. ಆದ್ದರಿಂದ ಇಲ್ಲಿಂದಲೆ  ಹುಡುಕಾಟ. ಮನುಷ್ಯ ಅಂದರೆ? ಸಮಾಜದ ಒಂದು ಅಂಗ, ಪ್ರಕೃತಿಯ ಸೆಲೆಯಲ್ಲಿನ ಒಂದು ಕೊಂಡಿ, ಜೀವಶಾಸ್ತ್ರದ ಪ್ರಯೋಗಶಾಲೆ, ಸಾದನೆಯ ಇತಿಹಾಸ, ಭಾವನೆಯ ಸಾಹಿತ್ಯ, ರೂಪಕದ ಕಲೆ, ವ್ಯವಹಾರದ ಅರ್ಥಶಾಸ್ತ್ರ,, ಸಾದನೆಯ ಆದ್ಯಾತ್ಮ. ಇಷ್ಟೇನ? ಅಥವ ಇಷ್ಟರಲ್ಲಿ ಅವನನ್ನು ಹಿಡಿಯಬೊಹುದ..? ನನಗಂತೂ ಮನುಷ್ಯ ಅಂದರೆ ಅದ್ಬುತ, ಮನುಷ್ಯ ಅಂದರೆ ಅಚ್ಚರಿ, ಮನುಷ್ಯ ಅಂದರೆ ಶಕ್ತಿ. ಮನುಷ್ಯ ಅಂದರೆ ಬದುಕು ಬದುಕು ಅಂದರೆ ಮನುಷ್ಯ. ಮನುಷ್ಯನನ್ನ ಕಂಡರೆ ಬದುಕನ್ನ ಕಂಡಂತೆ. ಬದುಕನ್ನ ಕಂಡರೆ ಮನುಷ್ಯನನ್ನ ಕಂಡಂತೆ. ಆದ್ದರಿಂದ ನನಗೆ ಮನುಷ್ಯನೇ ಹುಡುಕಾಟದ ಮೂಲ ದ್ರವ್ಯ. ಹೀಗೆ ಮನುಷ್ಯ ಅಂದರೆ ಏನು ಎಂಬ ಪ್ರಶ್ನೆಯನ್ನ ಇಟ್ಟುಕೊಂಡು ಕೂತಿದ್ದೇನೆ. ಒಂದೇಸಾಲಿಗೆ ಉತ್ತರ ಸಿಗುತ್ತದೆಂದು ಅನಿಸುವುದಿಲ್ಲ. ಆದರೆ ಈಗಿನ ತುರ್ತು ಎಂದರೆ ಮನುಷ್ಯ ಅಂದರೆ ಏನು ಅನ್ನೋ ಪ್ರಶ್ನೆ ಯಾಕೆ?

ಕಾಲ ಎಂದಿಗೂ ಸ್ಥಾವರ ಸ್ಥಿತಿಯನ್ನ ತಲುಪುವುದಿಲ್ಲ. ಅದು ನಿತ್ಯ ನಿರಂತರ ಜಂಗಮ. ಕಾಲ ಹರಿವಾಗ ಎಲ್ಲವನ್ನೂ ಪ್ರತೀ ಕ್ಷಣವನ್ನೂ ದಾಖಲಿಸಿ ಹೊರಡುತ್ತೆ. ಹೊರಡುತ್ತಿದೆ. ಮನುಷ್ಯಪ್ರಜ್ಞೆ ಅದನ್ನ ದಾಕಲಿಸಿದೆಯ ಇಲ್ಲವ ಎಂಬೋದು ಅದಕ್ಕೆ ಬೇಕಿಲ್ಲ. ಆದರೆ ಅದು ದಾಕಲಿಸುತ್ತಾ ಸಾಗುತ್ತದೆ. ಆ ದಾಕಲೆಗೆ ಎದುರಾದಾಗ ಮಾತ್ರ ನಾವು ದಾಖಲಿಸಬೇಕೆನಿಸುತ್ತದೆ. ಹೀಗೆ ಮನುಷ್ಯನ ಪ್ರಜ್ಞೆ ಕಾಲದ ಜಂಗಮ ಸ್ಥಿತಿಯೊಂದಿಗೆ ದಾಕಲಿಸುತ್ತಾ ಸಾಗುವಾಗ ಮನುಷ್ಯ ಪ್ರಜ್ಞೆಯೂ ಜಂಗಮಗೊಳ್ಳುತ್ತೆ ಹಾಗು ವಿಶ್ವಾತ್ಮಕಗೊಳ್ಳುತ್ತೆ. ಈ ವಿಶೇಷಕ್ಕೆ ಕಾಲದೊಳಗಿನ ಎಲ್ಲವನ್ನೂ ಒಮ್ಮೆ ಎದುರಿಗಿಟ್ಟುಕೊಂಡು ನೋಡಬೇಕಾಗುತ್ತೆ. ಏನಿದೆ ಇಲ್ಲಿ? ಏನಿಲ್ಲ ಇಲ್ಲಿ..? ಒಂದು ವಿರೋದಾಭಾಸದ ಉತ್ತರವನ್ನಂತೂ ಕಂಡೀತ ನೀಡಬಲ್ಲೆ. ಇಲ್ಲಿ ಎಲ್ಲವೂ ಇದೆ, ಏನೂ ಇಲ್ಲ.

ಒಂದಾನೊಂದು ಕಾಲದಲ್ಲಿ ಒಬ್ಬ ಮನುಷ್ಯನಿದ್ದ. ಆತ ಉಣ್ಣುತ್ತಿದ್ದ, ಮಲಗುತ್ತಿದ್ದ, ಮಕ್ಕಳನ್ನು ಹುಟ್ಟಿಸುತ್ತಿದ್ದ. ಆಗ ಆ ಕಾಲಕ್ಕೆ ತಕ್ಕಂತೆ ಅವನಿಗೆ ಬೇಕಾದಂತಹ ಸೌಕರ್ಯಗಳಿದ್ದವು, ಈಗಲೂ ಮನುಷ್ಯ ಇದ್ದಾನೆ. ಈಗಲೂ ಉಣ್ಣುತ್ತಿದ್ದಾನೆ, ಮಲಗುತ್ತಿದ್ದಾನೆ, ಮಕ್ಕಳನ್ನು ಹುಟ್ಟಿಸುತ್ತಿದಾನೆ. ಹಾಗಾದರೆ ಮುಂದುವರೆದದ್ದು ಎಲ್ಲಿ. ಹಾಗದರೆ ಕಾಲದ ಜೊತೆಯಲ್ಲಿ ನಡೆದದ್ದಾದರೂ ಎಲ್ಲಿಗೆ..? ಏನೂ ಇಲ್ಲವೆ..? ಇದೆ. ಮನುಷ್ಯ ಎಂದರೆ ಶಕ್ತಿ ಆದ್ದರಿಂದ ಇದೆ. ಅದು ಅವನ ಚಿಂತನೆಗಳ ಅರಿವು. ಅಂದು ಜನ ತಿಳಿದಿದ್ದರು ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನೆ ಅಂತ. ಆದರೆ ಈಗ ನಮಗೆ ಗೊತ್ತು ಸೂರ್ಯನೊಳಗೇನಿದೆ ಅಂತಲೂ. ಇಲ್ಲಿ ನಾವು ಬೆಳೆದದ್ದು. 

ಮಹಾ ದುರಂತಗಳು ಘಟಿಸಿಯಾಗಿವೆ ಇಲ್ಲಿ. ಒಬ್ಬೊಬ್ಬರನ್ನಲ್ಲ ಸಹಸ್ರಾರು ಮಂದಿಯನ್ನ ಹುಳುಗಳಂತೆ ಕಗ್ಗೊಲೆ ಮಾಡಿದ್ದಾಗಿದೆ. ಮನುಷ್ಯ ಇತಿಹಾಸದ ಪಾತ್ರಗಳಲ್ಲಿ ರಕ್ತವನ್ನ ಬೊಗಸೆಯಲ್ಲಿ ಕುಡಿದು ಕುಡಿದು ತೇಗಿದವರೇ ಹೆಚ್ಚು. ಆದರೂ ಮನುಷ್ಯ ಬದುಕಿದ್ದಾನೆ. ತಿರುಗಿ ಬಿದ್ದಿದಾನೆ. ಹೋರಾಡಿದ್ದಾನೆ. ಆ ಹೋರಾಟದ ನೆಲೆ ಸಿಕ್ಕಿದ್ದಾರು ಎಲ್ಲಿ..? ಪ್ರತೀ ಕಾಲದಲ್ಲೂ ಹೋರಾಟಗಳಾಗಿವೆ. ಈ ಹೋರಾಟಗಳಿಗೆ ಸೆಲೆ ಸಿಕ್ಕಿದ್ದಾದರೂ ಎಲ್ಲಿ, ಹೋರಾಟಗಳ ಪ್ರೇರಣೇಯಾದರೂ ಏನು?. ಮನುಷ್ಯ ಮನುಷ್ಯನ ನಡುವಿನ ಸಂಬಂದವಾದರೂ ಏನು,. ಇತಿಹಾಸದಲ್ಲಿ ಬರೀ ಇಷ್ಟೇ ಇರಲಿಲ್ಲ, ಅಲ್ಲೂ ಮನುಷ್ಯ ಪ್ರೀತಿಯಿದೆ, ನಂಬಿಕೆಯಿದೆ, ಮೌಲ್ಯಗಳಿವೆ. 

ಹೀಗೆ ಬರೆಯುತ್ತಾ ಹೋದರೆ ಸಾವಿರ ಕಾರಣಾಗಳನ್ನ ಕೊಡಬಲ್ಲೆ. ಆದರೂ ಕಡೆಯದಾಗಿ ಹೇಳಲೇ ಬೇಕು, ಎಲ್ಲಿಗೆಬಂದು ನಿಂತಿದ್ದೀವಿ ನಾವೀಗ. ನಾನು ಈಗತಾನೆ ವಿದ್ಯಾಬ್ಯಾಸವನ್ನ ಮುಗಿಸಿ ಬಂದಿದ್ದೇನೆ. ಇಷ್ಟುದಿನ ಪುಸ್ತಕಗಳ ಜೊತೆ ಪ್ರಯೋಗಶಾಲೆಯಲ್ಲಿ ಕಳೆದದ್ದಾಯಿತು. ಒಮ್ಮೆ ಮನುಷ್ಯರ ನಡುವೆ ಸಮಾಜಕ್ಕೆ ಬಂದಾಗ ಭಯವಾಗುತ್ತೆ. ಚದುರಿಹೋಗಿವೆ ಎಲ್ಲ ಇಲ್ಲಿ. ನಿದಾನಕ್ಕೆ ಕೊಲ್ಲುತ್ತಿದೆ. ಈಗಲೂ ಸಹಸ್ರಾರು ಮಂದಿ ಸಾಯುತ್ತಿದ್ದಾರೆ ಅವರಿಗೇ ತಿಳಿಯದ ರೀತಿಯಲ್ಲಿ, ಅಥವ ತಿಳಿದೂ ಸಾಯಲು ಸಿದ್ದರಾದ ರೀತಿಯಲ್ಲಿ. ಏನು ಮಾಡಬಲ್ಲೆ? ಏನಾದರು ಮಾಡ್ಬೇಕು, ಮಾಡಲೇಬೇಕು. ಮಾಡುತ್ತೇನೆ.
ಕಡೆಯದಾಗಿ "ಮನುಷ್ಯ ಅಂದರೆ ಏನು?" ಎಂಬೋ ಪ್ರಶ್ನೆ ಏತಕ್ಕೆ ಅಂದರೆ ನಾನೂ ಮನುಷ್ಯ ಆದ್ದರಿಂದ.....