.............................


()
ಮಧ್ಯ ರಾತ್ರೀಲಿ
ಯಾವುದೋ ಕನಸ ಕಂಡು ಎದ್ದು
ತಬ್ಬಿಬ್ಬಾಗಿ ಹೆದರಿ ಕತ್ತಲನ್ನ ಮುಟ್ಟಿ ಮುಟ್ಟಿ ನೋಡುತ್ತ
ದೀಪವಾಕಿದಾಗ
ಕನ್ನಡಿಯಲ್ಲಿ ನನ್ನದೊಂದು ಬಿಂಬವ
ಕಂಡು
ಯಾರೋ ಎಂದು ಗಾಬರಿಗೊಂಡು
ಮೈ ಮುಟ್ಟಿ ಮುಟ್ಟಿ ಗಿಚ್ಚಿ ನೋವನ್ನನುಭವಿಸಿ
"ನಿಜಕ್ಕೂ ನಾನೇನ ಅದು?"

ನಿಜದ ರಾತ್ರಿಗಳು ವಾಸ್ತವದ ಬಿಂಬದಲ್ಲಿ ಕೊನೆಗೊಂಡಿತು.

()

ಬದುಕು ನನ್ನನ್ನ
ಕವನದ ಸಾಲಿನ ರೂಪಕವನ್ನಾಗಿಸಿಬಿಟ್ಟಿತು.

ಮೊದಲ ರಾತ್ರಿ ಕಳೆದ ಆ ಹುಡುಗಿ
ರಾತ್ರಿ ನಿದ್ರೆಯಿಲ್ಲದ ಆ ಕೆಂಪು ಕಣ್ಣುಗಳಿಂದಲೇ
ನೇರ ನನ್ನ ಮುಂದೆ ನಿಂತು
"ಬಾ ಹೋಗುವ"
ಎಂದಾಗ
ಕವನ ಬರೆಯಲು ಹೊರಟುಬಿಟ್ಟೆ.

ಹೀಗೆ ಹೊರಟವನ ದಾರಿಯಲ್ಲಿ
ಯಾವುದೋ ಶವಯಾತ್ರೆ ಬಂದು ಸೇರಿ
ಶವಕ್ಕೆ ಬುರುಗೆಸೆಯುತ್ತಿದ್ದವನೊಬ್ಬ
ಯಾವುದೋ ಅನಿಮಿತ್ತ ಕಾರ್ಯಕ್ಕೆ ಹೋಗುತ್ತ
ನಾ ನಿಮಿತ್ತವಾಗಿ ಇದೇ ಕಾರ್ಯಕ್ಕೆ ಬಂದವನೇನೋ ಎಂಬಂತೆ
ನನ್ನ ಕೈಲಿ ಬುರುಗಿನ ಚೀಲವನ್ನ ಕೊಟ್ಟು
ಚಲ್ಲಲೇಳಿ ಹೊರಟುಬಿಟ್ಟ.

ನನಗೆ ರೂಪಕಗಳಾಗುವುದು ಕಂಡೀತ ಬೇಕಿಲ್ಲ
ಅದಕ್ಕಾಗಿ

()
ಚಿಟ್ಟೆಯ ಮೊಟ್ಟೆಗಳನ್ನುಡುಕಿ ಹೊರಟೆ
ಕಂಡಿತು
ಕೂತೆ
ಮೊಟ್ಟೆಯೊಡೆದು ಮರಿ ಹೊರಬರುವ ತನಕ
ಹೊರಬಂದ ಮರಿಹುಳು ತಿನ್ನಲು ಕೂತಿತು
ತಾ ಪೂರ್ಣ ಬೆಳೆವರೆಗು
ನಾ ನೋಡುತ್ತಾ ಕೂತೆ
ವಿಕಾಸದೊಳಗಿನ ಪ್ರತೀ ಹಂತವನ್ನ ಪ್ರತೀ ಕ್ಷಣವನ್ನ
ಯಾವುದೋ ರೆಂಬೆಗೆ ಕಚ್ಚಿ ಕೂತಿತು
ಒಂದು ಕ್ಷಣ ಹಿಂತಿರುಗಿ ನೋಡುವಷ್ಟರಲ್ಲಿ
ಮರಿಹುಳು ಕಾಣೆ
ಮರಿಹುಳು ಪೊರೆಹುಳುವಾಗಿಹೋಗಿತ್ತು.

ನಾ ಚಿಟ್ಟೆಯನ್ನ ಕಾಣಲೇ ಬೇಕಿತ್ತು
ಬದುಕಿನ ಪರಮೋದ್ದೇಶವೇನೋ ಎಂಬಂತೆ
ಪೊರೆಹುಳುವನ್ನೇ ನೋಡುತ್ತಾ ಕೂತೆ
ಕೂತೆ ನೋಡುತ್ತಾ ನೋಡುತ್ತಾ
ಎಲ್ಲವನ್ನೂ ಮರೆತುಬಿಟ್ಟೆ
ಚಿಟ್ಟೆಯನ್ನ ಕಾಣಬೇಕೆಂಬೋದನ್ನೂ ಸಹ
ಒಂದು ಕ್ಷಣ ಆ ಒಂದು ಕ್ಷಣ
ಪೊರೆಹುಳುವಿನಿಂದ ಚಿಟ್ಟೆ ತಾ ಹೊರಬಂದು
ರೆಕ್ಕೆ ಪಟ ಪಟ ಪಟ
ಹೊಡೆಯತೊಡಗಿತು
ನಾ ಕುಣಿಯತೊಡಗಿದೆ ಕಿರುಚಿದೆ ಅರಚಿದೆ
ಧ್ವನಿ ನಿಂತಿತು ದೇಹ ತಣ್ಣಗಾಯಿತು

ಚಿಟ್ಟೆ
ಹಾರಿಹೋಯಿತು
ನನ್ನೆದುರಿಗೆ