ಸಾಕ್ಷಿ



ನಾನು ನಿನಗೆ ಮೊದಲ ಪತ್ರ ಬರೆದ ದಿನ ನೆನೆಪಿಲ್ಲದೇ ಇರಬೊಹುದು, ಆದರೆ ಆ ಸ್ಥಿತಿ ನೆನೆಪಿದೆ. ಆಗ ನಡೆದ ಯಾವುದೋ ಕಾರಣಕ್ಕೆ, ಯಾಕೋ ಎಲ್ಲವನ್ನೂ ತೊರೆಯಲು ಸಿದ್ದನಾಗಿ, ಹಾಗೆ ತೊರೆಯಲು ತೊಡಗಿದಾಗ ಹಲವರನ್ನು ತೊರೆದು ನಿನ್ನ ಸಂಗಡ ಬಯಸಿ ನಿನ್ನನ್ನ ಅಪ್ಪಿಕೊಂಡೆ. ಆಗ ನಿನಗೆ ನನ್ನ ಮೊದಲ ಪತ್ರ ಬರೆದಿದ್ದೆ. ನಿನ್ನಿಂದ ಯಾವ ಉತ್ತರವೂ ಬರುವುದಿಲ್ಲ ಅಂತ ಸ್ಪಷ್ಟವಾಗಿ ತಿಳಿದಿದ್ದರೂ ಬರೆದೆ. ನಿನ್ನ ಉತ್ತರಕ್ಕಿಂತ ಹೆಚ್ಚಾಗಿ ನೀನು ನನ್ನ ಮಾತನ್ನ ಕೇಳೆಬೇಕಿತ್ತು ಅಷ್ಟೆ. ಹೀಗೇ ಬರೆಯುತ್ತಾ ಹೋದೆ. ಕಂಡದ್ದನ್ನ, ಕಣ್ಣಿಗೆ ಕಂಡ ಪ್ರತಿಯೊಂದನ್ನ. ಕಂಡು ಅದನ್ನ ಅನುಭವಿಸಿ, ನಿನಗೆ ತಿಳಿಸುತ್ತಾ ಹೋದೆ. ಯಾವುದೋ ಕ್ಷಣ ನಿಂತುಬಿಟ್ಟೆ. ನಿನ್ನನ್ನು ಬಿಟ್ಟು ಹೊರಟು ಬಿಡುವ ಸಂದರ್ಭ ಒದಗಿತು, ಅಲ್ಲ ನಾನೇ ನಿರ್ಮಿಸಿಕೊಂಡೆ. ಹೊರಟು ಬಿಟ್ಟೆ. ಕಡೆಗೆ ನೀನೂ ನನಗೆ ಬೇಸರವಾಗಿ ಹೋಗಿದ್ದೆ. ನಿಜಕ್ಕೂ ಅದು ಬೇಸರವ! ಮತ್ತೇ ಮತ್ತೇ ಪ್ರಶ್ನಿಸಿಕೊಳ್ಳುತ್ತಲೇ ಇದ್ದೇನೆ.

ನಿನ್ನನ್ನೂ ನಿನ್ನ ಜೊತೆಗಿನ ಮಾತನ್ನೂ ಬಿಟ್ಟಾಗ ನಾನು ಎಲ್ಲರೊಡನೆಯೂ ಮಾತಾಡತೊಡಗಿದೆ. ಏನೋ ಮಾಡಬೇಕು. ಸಾದಿಸಬೇಕು. ಕಡಿದು ಕಟ್ಟೆ ಹಾಕಿಬಿಡಬೇಕು. ನನ್ನದು ಎಂದು ಏನನ್ನಾದರೂ ಸ್ಥಾಪಿಸಿಬಿಡಬೇಕು. ಎಲ್ಲರೊಳೊಗೊಂದಾಗಿ ಸೇರಲು ತೊಡಗಿದೆ. ಜಗತ್ತು ವಿಶಾಲವಾಗಿತ್ತು. ಎಲ್ಲರಿಗೂ ನಾನು ಬೇಕಿತ್ತು. ಅಥವಾ ನಾನು ಹಾಗೆ ಬಾವಿಸಿದೆ. ಈಗ ಅನ್ನಿಸುತ್ತೇ, ಅವರಿಗೆಲ್ಲರಿಗೂ ನಾನು ಬೇಕಿತ್ತು ಎಂಬೋದು ಮಾತ್ರ ಸತ್ಯವಲ್ಲ. ನನಗೆ ಎಲ್ಲರೂ ಬೇಕಿತ್ತು, ಅದು ಪರಮ ಸತ್ಯ. ಆಗಾಗ ಅನ್ನಿಸುತ್ತಿತ್ತು, ಮೌನವಾಗಿ ಇದ್ದು ಬಿಡಬೇಕು ಅಂತ. ಆದರೆ ಅಗಲಿಲ್ಲ. ಅಸ್ಥಿತ್ವದ ಬಯಕೆ ಮಾತನಾಡಲು ಪ್ರೇರೇಪಿಸುತ್ತೆ. ಮಾತು ಅಸ್ಥಿತ್ವದ ಮೂಲ ಬೇರು. ಬಿಡೋದು ಹೇಗೆ. ಬಿಡಬೇಕೇಕೆ ಅನ್ನೋ ಅಹಂ. ಹಾಗಾಗಿ ಮಾತಿಗೆ ತೊಡಗೋದು, ಮಾತು ಮುಗಿದ ಮೇಲೆ ಅಲ್ಲೊಂದು ಸಂಬಂಧ ನಿರ್ಮಾಣವಾಗುತ್ತೆ. ಎಲ್ಲೋ ಚುಚ್ಚುತ್ತೆ ಅದು ನಂದಲ್ಲ ಅಂತ. ವಾಸ್ತವ ಹೇಳುತ್ತೆ, ಸುಮ್ಮನೆ ಹೆಗಲಿಗೇರಿಸಿಕೊಂಡು ನಡೆ ಅಂತ. ಬರಿಗಾಲಲ್ಲಿ ಹೆಗೆಲಿಗೇರಿಸಿಕೊಂಡು ಬಿಸಿಲ ದಾರಿಗಳಲ್ಲಿ ಹೊತ್ತ ಕಳೆಯಲು ತೊಡಗುತ್ತೆ. ಮಾತುಗಳನ್ನ ಹುಡುಕಿ ಹೊರಟೆ. ಬೇರೆಯವರ ಮಾತುಗಳನ್ನ ಕೇಳುವ ಸಲುವಾಗಿ ಅಥವಾ ನನ್ನ ಮಾತನ್ನು ಬೇರೆಯವರು ಕೇಳಬೇಕು ಎಂಬೋ ತೆವಲಿಗಾಗಿ. ನಿನ್ನನ್ನು ಬಿಟ್ಟು ಬಂದು ಹೀಗೆ ಸಿಕ್ಕವರ ಬಳಿ ಮಾತಿಗಿಳಿದೆ, ಎಲ್ಲೆಲ್ಲೋ ಸುತ್ತಿದೆ, ಮತ್ತೇ ನಿನ್ನ ಬಳಿಗೆ ಬಂದಿದ್ದೀನಿ. ಈಗ ಮೊದಲಿನಂತಲ್ಲ ಎಂದು ನಿನ್ನ ಬಳಿ ಹೇಳಬಲ್ಲೆ. ಅದರ ಸತ್ಯಾಸತ್ಯತೆಯ ತೀರ್ಪು ನಿನಗೇ ಸೇರಿದ್ದು.
ಬದಲಾವಣೆ ನಿರಂತರವಾಗಿ ಜರುಗುತ್ತಿದ್ದರೂ ಬದಲಾವಣೆಯ ಅರಿವು ಮಾತ್ರ ಒಂದು ಕ್ಷಣದಲ್ಲಿ ಸಂಬವಿಸಿಬಿಡುತ್ತೆ. ಒಂದೇ ಕ್ಷಣ. ಹಿಂದೆ ನೋಡಿ ಮತ್ತೆ ಆ ಕ್ಷಣಕ್ಕೆ ಹೋಗಲಾರೆ, ಆ ಕ್ಷಣ ಜರುಗಿಬಿಟ್ಟಿದೆ. ಮುಗಿಯಿತು. ಆದರೆ ಆ ಕ್ಷಣದ ನೆನಪು ಉಳಿದಿದೆ. ಆ ನೆನೆಪಿನಿಂದಲೇ ಬದುಕು ಮುಂದೆ ಸಾಗುತ್ತೆ.


ಹುಡುಕುತ್ತಾ ಮುಂದೇನೋ ದೊಡ್ಡದೊಂದನ್ನ ಇಟ್ಟುಕೊಂಡು ನಡೆಯುತ್ತಾ ಇರೋದು. ನೇರವಾಗಿ ನಡೆಯುತ್ತಾ ಸಾಗೋವಾಗ ಇದ್ದಕ್ಕಿದ್ದಂತೆ ಪಕ್ಕನೆ, ಮತ್ತೊಂದೇನೋ ದಾರಿ ಬದಿ ಕೂತು ಎಳೆದು ಬಿಡುತ್ತೆ. ನನ್ನೆಲ್ಲಾ ನಿಯಂತ್ರಣ ತಪ್ಪಿ ನಾನು ಅದರೊಟ್ಟಿಗೆ ಹೊರಟು ಬಿಡುತ್ತೇನೆ. ಹೊರಡಲೇ ಬೇಕಿತ್ತು ಎಂಬೋ ರೀತಿಯಲ್ಲಿ. ಹೀಗೆ ಪ್ರತೀ ಕ್ಷಣವೂ ಜರುಗುತ್ತಲೇ ಇರುತ್ತೆ ನಮ್ಮ ಗಮನಕ್ಕೆ ಬಂದೂ ಬಾರದ ರೀತಿಯಲ್ಲಿ. ಹಲವು ಬಾರಿ ಏನನ್ನೋ ಬರೆಯಲು ತೊಡಗುತ್ತೇನೆ, ಆದರೆ ಅದು ಮತ್ತೇನನ್ನೋ ಬರೆಸಿಬಿಡುತ್ತದೆ. ನಾನು ಮೊದಲ ಪದವನ್ನ ಬರೆದಾಗ ಚಿಂತಿಸಿದ್ದು ಇದನ್ನಲ್ಲ. ಆದರೆ ಬರೆಯಲು ತೊಡಗಿದಾಗ ಬರಹವೇ ನನ್ನನ್ನ ನಡೆಸಿಬಿಟ್ಟಿದೆ. ನನ್ನ ನಿಯಂತ್ರಣ ತಪ್ಪಿ ಹೋದದದ್ದನ್ನ ನಾನು ಮತ್ತೇ ತಂದು ನಿಲ್ಲಿಸಲಾರೆ. ನಾನು ಬರೆಯಬೇಕು ಅಂತ ಅಂದುಕೊಂಡದ್ದು ನನ್ನ ಎದುರಿಗೇ ಕೈ ಚೆಲ್ಲಿ ಕೂತಿದೆ. ನಾ ಅದನ್ನ ಎತ್ತಿಕೊಳ್ಳಲಾರೆ. ಕೃತಿ ತನ್ನ ತಾನೆ ಬರೆದುಕೊಳ್ಳುತ್ತದೆ, ಅಲ್ಲಿಯೇ ಪಾತ್ರಗಳು, ಅಲ್ಲಿಯೇ ಸನ್ನಿವೇಶಗಳು ಹೀಗೆ ಎಲ್ಲವನ್ನೂ ಅಲ್ಲೇ ನಿರ್ಮಿಸುತ್ತಾ ತನ್ನ ತಾನೆ ನಿರ್ಮಿಸಿಕೊಳ್ಳೋಕೆ ಹೊರಟುಬಿಡುತ್ತೆ. ನನ್ನದನ್ನ ನಾ ಬರೆಯೋದು ಯಾವಾಗ ಅಂತ ಪ್ರಶ್ನಿಸಿಕೊಳ್ಳುತ್ತೇನೆ.

ಮಧ್ಯ ರಾತ್ರಿಯಲ್ಲಿ ಪ್ರತೀ ಅಕ್ಷರವನ್ನೂ ಕಾಯುತ್ತಾ ಕಟ್ಟುತ್ತಾ ಕೂತಿರುತ್ತೇನೆ. ಹಾಗೆ ಕೂತಿರಲೇ ಬೇಕು. ಇನ್ನೇನೂ ಮಾಡಲೂ ಆಗದಂತೆ ಅಕ್ಷರಗಳು ನನ್ನನ್ನ ಬಂದಿಸಿಟ್ಟುಬಿಡುತ್ತದೆ. ಕತ್ತಲ ರಾತ್ರಿಯ ರಸ್ತೆಗಳು. ಒಂದು ನರಪಿಳ್ಳೆಯೂ ಇಲ್ಲ. ಒಂದು ಚೂರೂ ಬೆಳಕಿಲ್ಲ. ಅಲ್ಲೆಲ್ಲೂ ಹತ್ತಿರದಲ್ಲೆಲ್ಲೂ ಮನೆಗಳೂ ಕಾಣುತ್ತಿಲ್ಲ. ನನ್ನದು ಒಂದು ಒಂಟಿಮನೆ ಹಾಗು ಕೊನೆಯ ಮನೆ. ಆ ಕೊನೆ ಮನೆಯಲ್ಲಿ ಮಧ್ಯ ರಾತ್ರಿಯ ನಿಶ್ಯಬ್ದ ಮೌನದಲ್ಲಿ ಬರೆಯುತ್ತಾ ಕೂತು ಏನೋ ನೆನಪಾದವನಂತೆ ಉರಿಯುತ್ತಿದ್ದ ಲೈಟನ್ನ ಆರಿಸಿ ಆ ರಸ್ತೆಗಳಲ್ಲಿ ಹುಚ್ಚನಂತೆ ಅಲೆಯುತ್ತೇನೆ. ಗೀ ಅನ್ನೋ ಶಬ್ದದ ಬೆನ್ನು ಹತ್ತಿ ಕತ್ತಲನ್ನ ತಟ್ಟಿ ಎಬ್ಬಿಸಿ ಕೇಳಲು ತೊಡಗುತ್ತೇನೆ. ನಾಯಿ ಬೊಗಳಬೊಹುದು, ಆ ಶಬ್ದ ಕೇಳಬೊಹುದು. ಎಷ್ಟೇ ಕಾದರೂ ಏನೇ ಮಾಡಿದರೂ ಯಾವ ಶಬ್ದವೂ ಕೇಳುವುದಿಲ್ಲ. ಏನೋ ಕಳದುಕೊಂಡ ಭಾವದಲ್ಲಿ ಕತ್ತಲನ್ನ ಶಪಿಸುತ್ತಾ ರಾತ್ರಿಯ ಆ ದಾರಿಯಲ್ಲಿ ಮುಖ ಕೆಳಗೆ ಮಾಡಿ ನಡೆಯುತ್ತಾ ಇರುತ್ತೇನೆ. ಯಾವುದೋ ಅನಾಥ ಶವವೊಂದು ಹಾಗು ಆ ಕತ್ತಲಿಗಾಗೇ ಕಾಯುತ್ತಿದ್ದ ಪ್ರೇತಾತ್ಮವೊಂದು ಕೂಗಿ ಕರೆಯುತ್ತೆ. ಕತ್ತಲು ಭಯವಾಗುವುದಿಲ್ಲ. ರಸ್ತೆಗಳು ಯಾರೂ ಇಲ್ಲ ಅಂತ ಅನ್ನಿಸುವುದಿಲ್ಲ. ಅಲ್ಲೇ ಅದೇ ಕತ್ತಲಲ್ಲೆ, ಅದೇ ಸ್ಥಳದಲ್ಲೇ ಕೂತುಬಿಡುತ್ತೇನೆ. ಒಮ್ಮೆ ಕಣ್ಣುಮುಚ್ಚುತ್ತೇನೆ. ಶವಕ್ಕೆ ಜೀವ ಬಂದು ತನ್ನ ಕತೆಗೆ ನನ್ನನ್ನ ನಾಯಕನನ್ನಾಗಿಸಿ ಕರೆದೊಯ್ಯುತ್ತೆ. ಪ್ರೇತಾತ್ಮ ಜೀವಾತ್ಮವಾಗುತ್ತೆ. ಕತ್ತಲಿನೊಳಗಿಂದ ಒಂದೊಂದೇ ಹೆಜ್ಜೆಯಿಡುತ್ತಾ ಏನೋ ಸಂಭ್ರಮದಲ್ಲಿ ಶವವನ್ನ ಜೀವವನ್ನಾಗಿಸಿದ ಸಂಭ್ರಮದಲ್ಲಿ ರೂಮಿಗೆ ನಡೆಯುತ್ತೇನೆ. ತಕ್ಷಣಕ್ಕೆ ಪೆನ್ನು ದೊರಕುವುದಿಲ್ಲ. ತಬ್ಬಿಬ್ಬಾಗುತ್ತೇನೆ. ಎಲ್ಲೋ ಒಂದು ಕಾಗದದ ಚೂರು ಹಾರುತ್ತಿರುತ್ತದೆ. ಒಂದು ಶವಕ್ಕೆ ಜೀವ ನೀಡಿದ ಸಂಭ್ರಮದಲ್ಲಿ ಸೃಷ್ಟಿಕರ್ಥನಾಗಿ ಬರೆಯಲು ತೊಡಗುತ್ತೇನೆ. ಅಕ್ಷರಗಳು ನಿಲ್ಲುತ್ತವೆ. ಒಮ್ಮೆಗೆ ಅಲ್ಲೇ ಇದ್ದ ಪದಗಳು ಎದುರಿಗೆ ಬಂದು ಹೇಳುತ್ತವೆ, ನಾನು ಸತ್ತ ಶವವನ್ನ ಜೀವಂತಗೊಳಿಸಿದ್ದಲ್ಲ, ನಾನು ಸಾವನ್ನ ನೋಡಿ ಬಂದದ್ದು ಅಂತ. ಹಾಗೆ ಸಾವಿನಲ್ಲಿ ಅಕ್ಷರಗಳು ಮೂಡುತ್ತವೆ. ಎಲ್ಲಾ ಬರೆದಾದಮೇಲೆ ನನ್ನದನ್ನ ನಾನು ಯಾವಾಗ ಬರೆಯುವುದು ಎಂದು ಗಾಬರಿಯಿಂದ ಕೇಳಿಕೊಂಡಾಗ, ನನ್ನ ಸಾವನ್ನ ನಾನು ಕಂಡಾಗ ನಾನು ನನ್ನದನ್ನ ಬರೆಯಬಲ್ಲೆ ಅಂತ ಅನ್ನಿಸುತ್ತೆ. ಹಾಗೆ ಕಡೆಗೆ ನನ್ನ ಸಾವನ್ನ ಹುಡುಕಿ ಹೊರಡುತ್ತೇನೆ.

ಸ್ಮಾಶಾಣದಲ್ಲಿ ಗೋರಿಯ ಪಕ್ಕದಲ್ಲೇ ತೊಟ್ಟಿಲನ್ನಿಟ್ಟು ಆಟವಾಡುವ ಸಮಯಕ್ಕೆ ಬದುಕಿನ ಎಲ್ಲಾ ಕ್ಷಣಗಳನ್ನೂ ಮೀಸಲಿಟ್ಟೆ. ವರ್ಥಮಾನದ ಕ್ಷಣಗಳು ಒಂದಾ ಬೂತದೊಂದಿಗೆ ಅಥವಾ ಭವಿಷ್ಯದೊಂದಿಗೆ ಕೂಡಿಯೇ ಬರುತ್ತದೆ. ಕತೆಕಟ್ಟಲು ಹೊರಟ್ಟಿಲ್ಲ ಅದರ ಅವಷ್ಯಕತೆಯೂ ಇಲ್ಲ. ಸಂಬಂಧಗಳ ನಿಗೂಢತೆಯನ್ನ ಬೇದಿಸಬಲ್ಲೆ ಎಂಬೋ ವಿಶ್ವಾಸವನ್ನೇ ಕಳೆದುಕೊಂಡಿದ್ದೇನೆ.
ಎದುರಿಗಿದ್ದ ಹುಡುಗಿ ಕೇಳುತ್ತಾಳೆ,
"ನನ್ನನ್ನ ಮದುವೆಯಾಗುತ್ತೀಯ?"
ಬೀಚಿನಲ್ಲಿ ನಡೆಯುತ್ತಿದ್ದೆ. ಇಡೀ ಸಮುದ್ರವೇ ನನ್ನನ್ನ ಎಳೆದುಕೊಂಡಂತೆ ಒಂದು ಕ್ಷಣ ಅನ್ನಿಸಿತು. ಮರಳಿನಲ್ಲಿ ಹೂತುಹೋಗಲು ತೊಡಗಿದೆ. ಭಯವಾಯಿತು. ಅವಳೇ ಕೈ ನೀಡಿದಳು. ಹಿಡಿದುಕೊಂಡೆ, ಬಿಟ್ಟರೇ ನನ್ನ ಸಾವು. ಅವಳು ದೊಡ್ಡವಳು, ಮೇಲೆತ್ತಿದಳು. ಮತ್ತೇ ಮುಖ ನೋಡಲಿಲ್ಲ. ಸಮುದ್ರ ವಿಶಾಲವಾಗಿತ್ತು. ಮೇಲೆ ಹಲವು ಬಣ್ಣ. ಕಾಲಿಗೊಂದು ಬಾಟಲಿ ಕಂಡಿತು. ಆಚೆ ದಡದಲ್ಲಿ ಯಾರೋ ಅನಾಮಿಕನೊಬ್ಬ ಕುಡಿದು ಬಿಸಾಕಿದ ಬಾಟಲಿ. ಅದರೊಳಗೆ ಹೆಸರು ತಿಳಿಯದ ಒಂದಿಷ್ಟು ಜೀವಿಗಳು ಆಗತಾನೆ ಕಣ್ಣು ಬಿಡುತ್ತಿದ್ದವು. ಅವುಗಳ ಉಸಿರ ಹಬೆಯನ್ನ ಹೀರಿಸೋ ಇಚ್ಚೆ ನನಗೆ. ಕಡೆಯ ಬಾರಿಗೆ ಹಿಂದೆ ತಿರುಗಿ ನೋಡುವ ಅಂತ ಅನ್ನಿಸಿತು, ಬದುಕು ದೈರ್ಯ ಕೊಡಲಿಲ್ಲ. ಅನಾಮಿಕವಾಗಿ ದಾರಿಯಲ್ಲಿ ಈ ಬಾಟಲಿಯಲ್ಲಿ ಸಿಕ್ಕ ಜೀವಿಯೊಂದಿಗೆ ಉಸಿರ ಹಂಚಿಕೊಂಡು ಸಮುದ್ರಕ್ಕೆಸೆದು ನಡೆದುಬಿಟ್ಟೆ.